ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ನಾಯಕರು ತಮ್ಮಲ್ಲಿನ ಒಳ ಜಗಳ ಮುಚ್ಚಿಡಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಹುದ್ದೆ, ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ನೇತೃತ್ವದಲ್ಲೇ ಚುನಾವಣೆಯಾಗಲಿದೆ. ರಾಜ್ಯಾಧ್ಯಕ್ಷ, ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನವರು ಮೊದಲು ಅವರ ಪಕ್ಷದ ಗೊಂದಲ ಸರಿಪಡಿಸಿಕೊಳ್ಳಲಿ. ದಾವಣಗೆರೆ ಸಮಾವೇಶದ ಬಳಿಕ ಕಾಂಗ್ರೆಸ್ ನಲ್ಲಿ ಬಿರುಕು ಮೂಡಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಜಗಳ ಬೀದಿಗೆ ಬಂದಿದೆ. ಮೂಲ ಕಾಂಗ್ರೆಸ್ಸಿಗರು ಸಭೆ ಮಾಡಿದ್ದಾರೆ. ಸಿದ್ದರಾಮೋತ್ಸವ ವಿರುದ್ಧ ಡಿಕೆಶಿಯಿಂದ ಸ್ವಾತಂತ್ರ್ಯ ನಡಿಗೆ ಆರಂಭವಾಗಲಿದೆ. ಹೀಗಾಗಿ ಕಾಂಗ್ರೆಸ್ ಒಳಜಗಳ ಮುಚ್ಚಿಡಲು ಹೀಗೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನವರಿಗೆ ಮುಂದಿನ ಚುನಾವಣೆಗೆ ಯಾರ ನಾಯಕತ್ವ ಎಂದು ಹೇಳಲು ಭಯ. ಮೊದಲು ಅವರ ನಾಯಕ ಯಾರು ಅಂತ ಘೋಷಣೆ ಮಾಡಲಿ. ಘೋಷಣೆ ಮಾಡಿದರೆ ಕಾಂಗ್ರೆಸ್ ಎರಡು ಭಾಗವಾಗುತ್ತೆ. ಸಿದ್ದರಾಮಯ್ಯ, ಡಿಕೆಶಿ ಕಾಂಗ್ರೆಸ್ ಎಂದು ಇಬ್ಭಾಗವಾಗಲಿದೆ. ಕಾಂಗ್ರೆಸ್ ನವರಿಗೆ ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲು ಹಾಕಿದರು.