ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ನಾಳೆ ಬೆಳಿಗ್ಗೆ 11 ಗಂಟೆಗೆ ಮುಕ್ತಾಯವಾಗಲಿದೆ. ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಐಕ್ಯತಾ ಯಾತ್ರೆಯಿಂದ ದೇಶದಲ್ಲಿ ಖಂಡಿತ ಬದಲಾವಣೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಯಚೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಯಾತ್ರೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇವರು ಪಕ್ಷವನ್ನು ನೋಡಿಲ್ಲ. ಎಲ್ಲರೂ ಬದುಕು, ಭವಿಷ್ಯ, ದೇಶದಲ್ಲಿ ಶಾಂತಿ ಮರುಸ್ಥಾಪನೆ, ನಿತ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ನೋಡಿ ಶುಭಕೋರಲು ಉತ್ಸುಕರಾಗಿ ಬರುತ್ತಿದ್ದಾರೆ. ಜತೆಗೆ ಅವರ ಆಚಾರ, ವಿಚಾರ, ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಜಾತಿ, ಧರ್ಮ, ಪಕ್ಷ ಬೇಧ ಮರೆತು ಎಲ್ಲ ವರ್ಗದವರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯ ರಸ್ತೆ ಮೇಲೆ ಕಾಂಗ್ರೆಸ್ ಯಾತ್ರೆ ಎಂದು ಲೇವಡಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಈ ಕೈ ಪಕ್ಷ ದೇಶದ ಜನರಿಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ಕೊಟ್ಟು, ಆಣೆಕಟ್ಟು ನಿರ್ಮಿಸಿ, ಅನ್ನ ಬೆಳೆಯಲು ಅವಕಾಶ, ಉದ್ಯೋಗ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಿದೆ. ಇದಾದ ಮೇಲೆ ಅವರು ಅಧಿಕಾರ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ಬಿಜೆಪಿ ಅವರು ಏನು ಬೇಕಾದರೂ ಹೇಳಲಿ. ಯಾವುದಾದರೂ ನಾಯಕ ದೇಶದುದ್ದಕ್ಕೂ 3570 ಕಿ.ಮೀ ಪಾದಯಾತ್ರೆ ಮಾಡುವ ಸಾಹಸಕ್ಕೆ ಕೈ ಹಾಕಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ನಮಗೂ ಆರಂಭದಲ್ಲಿ ಕಷ್ಟ ಆಗಿತ್ತು. ಅವರು ಬಿಸಿಲು, ಮಳೆ ಲೆಕ್ಕಿಸದೆ ಯಾತ್ರೆ ಮಾಡುತ್ತಿದ್ದಾರೆ. ಅವರು ಪ್ರಧಾನಮಂತ್ರಿ ಸ್ಥಾನದ ಅವಕಾಶ ತ್ಯಾಗ ಮಾಡಿ, ಪಕ್ಷದ ಅಧಿಕಾರ ಬಿಟ್ಟುಕೊಟ್ಟು ದೇಶದಲ್ಲಿ ಬದಲಾವಣೆ ತರಲು ನಡೆಯುತ್ತಿದ್ದಾರೆ. ಇದು ಬದಲಾವಣೆ ಹೆಜ್ಜೆ ಎಂದು ಹೇಳಿದ್ದಾರೆ.