ಮಂಡ್ಯ: ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನಡೆದಷ್ಟು ಭ್ರಷ್ಟಾಚಾರ ದೇಶದಲ್ಲಿ ಬೇರೆಲ್ಲೂ ಆಗಿಲ್ಲ. ಅವರ ಅವಧಿಯ ಹಗರಣಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ದುಡ್ಡಿದ್ದರೆ ಮಾತ್ರ ನೌಕರಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಅವಧಿಯ ಎಲ್ಲಾ ಪ್ರಕರಣಗಳ ಮಾಹಿತಿಯನ್ನು ಅಂಕಿ-ಅಂಶಗಳ ಸಮೇತ ಕಳುಹಿಸುತ್ತಿದ್ದೇನೆ ಎಂದರು.
ರಾಹುಲ್ ಗಾಂಧಿಯವರಿಗೆ ಜಾಣ ಮೆರೆವಿರಬೇಕು. ಇಲ್ಲವೇ ರಾಜ್ಯ ಕಾಂಗ್ರೆಸ್ ನವರು ಅವರಿಗೆ ತಪ್ಪು ಮಾಹಿತಿ ನೀಡಿರಬೇಕು. ಅವರ ಕಾಲದಲ್ಲಿ ನೇಮಕಾತಿಯಲ್ಲಿ ಆದಷ್ಟು ಭ್ರಷ್ಟಾಚಾರ ಭಾರತ ದೇಶದಲ್ಲಿ ಎಲ್ಲೂ ಆಗಿಲ್ಲ. ಪೊಲೀಸ್ ಪೇದೆ, ಶಿಕ್ಷಕರು, ಪಿ.ಯು.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ವಿಚಾರದಲ್ಲಿ ಭ್ರಷ್ಟಾಚಾರವಾಗಿ ತನಿಖೆಯೂ ನಡೆಯುತ್ತಿದೆ. ಇದೆಲ್ಲದರ ಮಾಹಿತಿ ಅವರಿಗೆ ಕಳುಹಿಸಲಾಗುತ್ತದೆ. ಮೊದಲು ಅವರ ಆಡಳಿತದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಕನ್ನಡಿಯಲ್ಲಿ ನೋಡಿಕೊಂಡು ಆಮೇಲೆ ಮಾತನಾಡಲಿ ಎಂದು ಗುಡುಗಿದ್ದಾರೆ.