ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಜಂಗಲ್ ರಾಜ್ಯ ಶುರುವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಜೈನಮುನಿಗಳು, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ನಮ್ಮ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ಆದರೂ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೈನಮುನಿ ಹತ್ಯೆ ಕೇಸ್ ನ್ನು ಸಾಮಾನ್ಯ ಕೊಲೆ ಎಂಬಂತೆ ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ಕೆಳ ಹಂತದ ಪೊಲೀಸರ ಮೇಲೆ ಒತ್ತಡವಿದೆ. ಒಂದೆಡೆ ಭೂ ಮಾಫಿಯಾ ತಡೆಯಲು ಹೋದ ಹೆಡ್ ಕಾನ್ಸ್ ಟೇಬಲ್ ಹತ್ಯೆಯಾಗುತ್ತದೆ. ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗದಿರುವುದು ದುರಂತ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಜಂಗಲ್ ರಾಜ್ಯ ಆರಂಭವಾಗಿದೆ ಎಂದು ಕಿಡಿಕಾರಿದರು.
ಜೈನಮುನಿಗಳ ಹತ್ಯೆ ಕೇಸ್ ನ್ನು ಸಿಬಿಐಗೆ ವಹಿಸಬೇಕು. ನಿಸ್ಪಕ್ಷಪಾತ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.