ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿದ್ದರೂ ಈವರೆಗೂ ಮಹಿಳೆಯರಿಗಾಗಿ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ. ಬಿಜೆಪಿ ಮಹಿಳೆಯರ ಪರವಾಗಿ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ನಾ ನಾಯಕಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲಿಯವರೆಗೆ ಮಹಿಳೆಯರ ಅಭಿವೃದ್ದಿ ಆಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಮಹಿಳಾ ವಿರೋಧಿಯಾಗಿದೆ. ಮಹಿಳೆಯರ ಪರವಾಗಿ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸಲಿದೆ. ರಾಜಕೀಯದಲ್ಲಿಯೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುತ್ತೇವೆ. ವಿಧಾನಸಭೆ, ಪರಿಷತ್, ಲೋಕಸಭೆಯಲ್ಲಿಯೂ ಮೀಸಲಾತಿ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.