ಬೆಂಗಳೂರು: ಕಾಂಗ್ರೆಸ್ ಚಿಂತನ ಶಿಬಿರ ನಕಲಿ ಗಾಂಧಿ ಕುಟುಂಬದ ಪುನಶ್ಚೇತನಾ ಶಿಬಿರ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಯುವ ನಾಯಕರು ಯಾರು? ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ? 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ “ಯಯಾತಿ”ಗಳ ಮೋಹ ಕಳಚುವುದೇ? ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60+, ಚಿಂತನಾ ಶಿಬಿರದಲ್ಲಿ 50% ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್ 60+ ನಿಂದ 30+ ಗೆ ಇಳಿಯುವುದು ನಿಶ್ಚಿತ! ಎಂದು ಹೇಳಿದೆ.
ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್ ಪಕ್ಷದ ಹೊಸ ನಾಟಕ. ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ. 70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು! ಎಂದು ವಾಗ್ದಾಳಿ ನಡೆಸಿದೆ.