ಮೈಸೂರು: ಮೈಸೂರಿನಲ್ಲಿ ಪುರಾತನ ಹಿಂದೂ ದೇವಾಲಯಗಳ ತೆರವು ಮಾಡಿರುವ ಜಿಲ್ಲಾಡಳಿತದ ಕ್ರಮಕ್ಕೆ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಕೇವಲ ದೇವಾಲಯಗಳನ್ನೇ ಟಾರ್ಗೆಟ್ ಮಾಡುತ್ತಿರುವುದಾದರೂ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸುಪ್ರೀಂ ಕೋರ್ಟ್ ಆದೇಶದಂತೆ ದೆವಾಲಯಗಳ ತೆರವು ಎಂದು ಹೇಳುವ ಮೂಲಕ ಜಿಲ್ಲಾಡಳಿತ ಜನರ ದಾರಿ ತಪ್ಪಿಸುತ್ತಿದೆ. ದೇವಾಲಯಗಳನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಚರ್ಚ್, ಮಸೀದಿಗಳು ಕಾಣುತ್ತಿಲ್ಲವೇ? ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸಬೇಕಿತ್ತು, ಸಂಗ್ರಹಿಸಿದ್ದಾರೆಯೇ ಎಂದು ಕೇಳಿದ್ದಾರೆ.
SHOCKING NEWS: ನಡುರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ
ಇದನ್ನು ಪ್ರಶ್ನಿಸಿದರೆ ಜಿಲ್ಲಾಡಳಿತ ದಬ್ಬಾಳಿಕೆ ಎನ್ನುತ್ತಿದೆ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ಸಹಜವಾಗಿ ಇರುತ್ತೆ. ಧರ್ಮ ಪ್ರೀತಿಸುವ ಎಲ್ಲರಿಗೂ ಆಕ್ರೋಶ ಸಹಜ. ಕಳ್ಳರಂತೆ ಬೆಳಗಿನಜಾವ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದ್ದಾರೆ. ಬೆಳಗಿನಜಾವ 3-4 ಗಂಟೆ ಸಮಯ ಅದು ಕಳ್ಳರು ಬರುವ ಸೂಕ್ತ ಸಮಯ. ಇಂತಹ ಸಮಯದಲ್ಲಿ ಕಳ್ಳರಂತೆ ಬಂದು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನ 101 ಗಣಪತಿ ದೇವಾಲಯ ನಮ್ಮ ಪ್ರತೀಕ. ದೇಗುಲಗಳನ್ನು ತೆರವು ಮಾಡಿದರೆ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ. ಜನರ ನಂಬಿಕೆಗಳಿಗೆ ನೋವುಂಟು ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.