ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಾಟರ್ ಟೆಸ್ಟಿಂಗ್ ವರದಿ ಬಂದಿದ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ.
ರಾಂಪುರ ನೀರು ಶುದ್ಧೀಕರಣ ಘಟಕದ ನೀರನ್ನು ಪರೀಕ್ಷೆಗೆ ಒಳ ಪಡಿಸಲಾಗಿದ್ದು, ಒಟ್ಟು 24 ಮಾದರಿಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ದೃಢಪಟ್ಟಿದೆ. ಬಲ್ಕ್ ವಾಟರ್ ಸಪ್ಲೈ ಹಂತದಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ.
ಸುಮಾರು 16 ವರ್ಷಗಳಿಂದ ರಾಂಪುರ ನೀರು ಶುದ್ಧೀಕರಣ ಘಟಕವನ್ನು ನಿರ್ವಹಣೆ ಮಾಡಿಲ್ಲ. ಹೀಗಾಗಿ ಹೂಳು ತುಂಬಿರುವ ರೀತಿಯಲ್ಲಿ ಕೆಸರು ತುಂಬಿಕೊಂಡಿದ್ದು, ಕಳೆದ 15 ದಿನಗಳಿಂದ ನೀರಿನ ಶುದ್ಧೀಕರಣ ಮಾಡುತ್ತಿದ್ದರೂ ಸಾಧ್ಯವಾಗಿಲ್ಲ.
ಇನ್ನು ಟೆಸ್ಟಿಂಗ್ ರಿಪೋರ್ಟ್ ಬಂದ ಬೆನ್ನಲ್ಲೇ ರಾಯಚೂರು ನಗರದಾದ್ಯಂತ ನೀರಿನ ಪರೀಕ್ಷೆಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಸೂಚಿಸಿದ್ದಾರೆ. ಡಿ ಹೆಚ್ ಓ ಮೂಲಕ 1000 ವಾಟರ್ ಸ್ಯಾಂಪಲ್ಸ್ ಪಡೆಯಲು ಸೂಚನೆ ನೀಡಿದ್ದಾರೆ.