ಬೆಳಗಾವಿ: ಕಲುಷಿತ ನೀರು ಸೇವಿಸಿ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪರಿಹಾರ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಶಿವಪ್ಪ ಬೆಳ್ಳೇರಿ ಎಂಬ 70 ವರ್ಷದ ವೃದ್ಧ ಸಾವನ್ನಪ್ಪಿದ್ದರು. ಕಲುಷಿತ ನೀರು ಸೇವಿಸಿದ 70 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ.
ಇದೀಗ ಕಲುಷಿತ ನೀರು ಸೇವಿಸಿ ವೃದ್ಧ ಶಿವಪ್ಪ ಬೆಳ್ಳೇರಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮೃತ ಶಿವಪ್ಪ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಜಿಲ್ಲಾಂಪಚಾಯತ್ ಸಿಇಓ, ಆರೋಗ್ಯಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಗ್ರಾಮಸ್ಥರು ಪೈಪ್ ಲೈನ್, ಬೋರ್ ವೆಲ್ ನೀರು ಬಳಸಬಾರದು, ಶುದ್ಧ ಕುಡಿಯುವ ನೀರನ್ನೇ ಬಳಸಬೇಕು ಎಂದು ಮನವಿ ಮಾಡಿದ್ದಾರೆ.