ಬೆಂಗಳೂರು: ಕಲಬುರ್ಗಿ ಪಾಲಿಕೆ ಚುನಾವಣೆ ಮೈತ್ರಿ ವಿಚಾರ ಇನ್ನೂ ಕಗ್ಗಂಟಾಗಿದ್ದು, ಜೆಡಿಎಸ್ ನಾಳೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ನಾಳೆ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ದಳಪತಿಗಳು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಕಲಬುರ್ಗಿ ಕಾರ್ಪೊರೇಟರ್ ಗಳು ಬೆಂಗಳೂರು ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ರಾಜಕೀಯ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಜೊತೆ ಮೈತ್ರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಒಲವು ತೋರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ದೇವೇಗೌಡರು ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.
ಆದರೆ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಬಗ್ಗೆ ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸಲಿದೆ.