ನವೆಂಬರ್ 1ರ ಮಂಗಳವಾರ ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನಟರುಗಳಾದ ರಜನಿಕಾಂತ್, ಜ್ಯೂನಿಯರ್ ಎನ್.ಟಿ.ಆರ್, ಮೂರ್ತಿ ಪ್ರತಿಷ್ಠಾನದ ಸುಧಾ ಮೂರ್ತಿ ಹಾಜರಾಗಿದ್ದು, ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಗಣ್ಯರು ಹಾಗೂ ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಇದರ ಮಧ್ಯೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಮುದ್ರಿಸಲಾಗಿದ್ದರೂ ಸಹ ಶಿಷ್ಟಾಚಾರದ ರೀತಿಯಲ್ಲಿ ಖುದ್ದಾಗಿ ಆಹ್ವಾನ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಅಧಿಕಾರಿಗಳ ಮೂಲಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರ ಕಚೇರಿಗೆ ಆಹ್ವಾನ ಪತ್ರಿಕೆ ತಲುಪಿಸಲಾಗಿದ್ದು, ಕಡೆ ಪಕ್ಷ ದೂರವಾಣಿ ಮೂಲಕವೂ ಆಹ್ವಾನ ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ವಿಚಾರವನ್ನು ಖುದ್ದು ಸಿದ್ದರಾಮಯ್ಯ ತಿಳಿಸಿದ್ದರಲ್ಲದೆ ಆಹ್ವಾನ ಇಲ್ಲದಿರುವ ಕಾರಣಕ್ಕೆ ತಾವು ಸಮಾರಂಭಕ್ಕೆ ಹೋಗುತ್ತಿಲ್ಲ ಎಂದಿದ್ದರು. ಹಾಗೆಯೇ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹರಿಪ್ರಸಾದ್ ಅವರು ಸಹ ಗೈರು ಹಾಜರಾಗಿದ್ದು, ರಘುನಾಥ್ ಮಲ್ಕಾಪುರೆ ಮಾತ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.