ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎರಡೂ ರಾಜ್ಯಗಳ ನಡುವಿನ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮುಂಜಾಗೃತಾ ಕ್ರಮವಾಗಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಬೇಕಿದ್ದ ಬಸ್ ಗಳನ್ನೂ ಬಂದ್ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಶಿವಸೇನೆ, ಎಂಇಎಸ್, ಎಂ ಎನ್ ಎಸ್ ಪುಂಡರು ಕಲ್ಲು ತೂರಾಟ ನಡೆಸಿ ಮಸಿ ಬಳಿದ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಕನ್ನಡಿಗರ ಸ್ವಾಭಿಮಾನ ಕೆರಳಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೂ ಮಹಾರಾಷ್ಟ್ರ ಸಾರಿಗೆ ಬಸ್ ಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಬೆಳಗಾವಿ ಪೊಲೀಸರ ಸೂಚನೆ ಮೇರೆಗೆ ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ 150 ಬಸ್ ಗಳು ಬಂದ್ ಆಗಿವೆ. ಪರಿಸ್ಥಿತಿ ಸುಧಾರಿಸುವವರೆಗೂ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.