ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸಭೆ ಮೇಲೆ ಸಭೆಗಳನ್ನು ನಡೆಸುತ್ತಿದ್ದು, ಈ ಬಗ್ಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಕರ್ನಾಟಕ ಕಾಂಗ್ರೆಸ್ ಪಟಾಲಂ ದಿಲ್ಲಿಯಲ್ಲಿದೆ. ಕನ್ನಡಿಗ ಖರ್ಗೆಯವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ರಾಜ್ಯ ಕಾಂಗ್ರೆಸ್
ನಾಯಕರು ಸ್ವಂತಿಕೆಯನ್ನೇ ಮರೆತು “ಜೀ ಹುಜೂರ್” ಸಂಸ್ಕೃತಿಗೆ ಶರಣಾಗಿದ್ದಾರೆ ಎಂದು ಲೇವಡಿ ಮಾಡಿದೆ.
2013 ರಿಂದ 2018ರವರೆಗೆ ಏನಾಗಿತ್ತು ನೆನಪಿಸಿಕೊಳ್ಳಿ. ಕೆ.ಸಿ. ವೇಣುಗೋಪಾಲ್ ಎಂಬ ಸೋನಿಯಾ ಗಾಂಧಿಯವರ ಅಂಚೆಯಣ್ಣನ ಪಾದಾರವಿಂದಗಳಿಗೆ ರಾಜ್ಯದ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಅರ್ಪಿಸಲಾಗಿತ್ತು. ಸಿದ್ದರಾಮಯ್ಯನವರು ಕನ್ನಡ ಅಸ್ಮಿತೆಯನ್ನು ಅವರ ಮುಂದೆ ನೈವೇದ್ಯಕ್ಕಿಟ್ಟಿದ್ದರು. ಈಗ ಅಧಿಕಾರವಿಲ್ಲದಿದ್ದರೂ ಅದೇ ಸಂಸ್ಕೃತಿ ಮರುಕಳಿಸಿದೆ ಎಂದು ವಾಗ್ದಾಳಿ ನಡೆಸಿದೆ.
ಈಗ ಅಧಿಕಾರವಿಲ್ಲದೇ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್ ಸಂಪದ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿಗಳನ್ನು ತುಂಬಿಸಿಕೊಳ್ಳಲು ಎಟಿಎಂನಂತೆ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎಂದು ಸರಣಿ ಟ್ವೀಟ್ ಮೂಲಕ ಟೀಕಾಪ್ರಹಾರ ನಡೆಸಿದೆ.