ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಬೆನ್ನಲ್ಲೇ ಎಂಇಎಸ್ ಮಹಾಮೇಳಾವ್ ಗೆ ಬ್ರೇಕ್ ಹಾಕಲಾಗಿದ್ದು, ಇದನ್ನು ಖಂಡಿಸಿ ಕರ್ನಾಟಕಕ್ಕೆ ನುಗ್ಗಿ ದಾಂಧಲೆ ನಡೆಸಲು ಮುಂದಾಗಿದ್ದ ಮಹಾ ವಿಕಾಸ ಅಗಾಡಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮೇಳಾವ್ ಗೆ ತಡೆಯೊಡ್ದುತ್ತಿದ್ದಂತೆ ಮಹಾರಾಷ್ಟ್ರದಿಂದ ಸಾವಿರಾರು ಮಹಾ ವಿಕಾಸ ಅಗಾಡಿ ಕಾರ್ಯಕರ್ತರು ಕರ್ನಾಟಕದತ್ತ ಧಾವಿಸಿ ಬಂದಿದ್ದು, ಬೆಳಗಾವಿಯ ಗಡಿ ಭಾಗದಲ್ಲಿ ನುಗ್ಗಲು ಯತ್ನಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಕೊಗನಳ್ಳಿ ಚೆಕ್ ಪೋಸ್ಟ್ ಬಳಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.
ಈ ವೇಳೆ ಸೇತುವೆ ಮೇಲೆ ಹತ್ತಿ ಭಾಷಣ ಮಾಡಲು ಆರಂಭಿಸಿದ ಪುಂಡರು, ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ ಸಂಯುಕ ಮಾಹಾರಾಷ್ಟ್ರಕ್ಕೆ ಸೇರಿಸುವಂತೆ ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರನ್ನು ತಡೆಯಲು ಮುಂದಾದ ಪೊಲೀಸರ ವಿರುದ್ಧ ವಾಗ್ವಾದಕ್ಕಿಳಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಮಹಾಮೇಳಾವ್ ಗೆ ಬ್ರೇಕ್ ಬೀಳುತ್ತಿದ್ದಂತೆ ಕರ್ನಾಟಕಕ್ಕೆ ನುಗ್ಗಲು ಯತ್ನಿಸಿದ್ದ ಮಹಾ ಕಿಡಿಗೆಡಿಗಳ ಪುಂಡಾಟವನ್ನು ಪೊಲೀಸರು ತಡೆದಿದ್ದಾರೆ.