ಕಲಬುರ್ಗಿ: ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದು ಕರ್ನಾಟದ ಚುನಾವಣೆಗೆ ದಿಕ್ಸೂಚಿಯಾಗಲ್ಲ. ಗುಜರಾತ್ ಗೂ, ಕರ್ನಾಟಕಕ್ಕೂ ಎಷ್ಟೋ ಕಿ.ಮೀ. ದೂರವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಗುಜರಾತ್ ನಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಶಕ್ತಿ ಕುಂದಿದೆ. ಗುಜರಾತ್ ನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕಾಂಗ್ರೆಸ್ ಗೂ ನಿರೀಕ್ಷೆ ಇತ್ತು. ಆದರೆ ಗುಜರಾತ್ ರಾಜಕಾರಣವೇ ಬೇರೆ, ಕರ್ನಾಟಕದ ರಾಜಕಾರಣವೇ ಬೇರೆ. ಗುಜರಾತ್ ಫಲಿತಾಂಶ ನೋಡಿ ಕನ್ನಡಿಗರು ಮತ ಹಾಕಲ್ಲ ಎಂದರು.
ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯಲ್ಲ. ಇದು ರಾಜ್ಯದ ಚುನಾವಣೆ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮ್ಯಾಜಿಕ್ ವರ್ಕ್ ಆಗಲ್ಲ. ರಾಜ್ಯದ ಜನರಿಗೆ ಮೋದಿ ಮ್ಯಾಜಿಕ್ ಬಗ್ಗೆ ಈಗಾಗಲೇ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡಿಂಗ್ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆಪ್ ಬಿಜೆಪಿ ಬಿ ಟೀಂ ಎಂದು ನಾನು ಹೇಳಿಲ್ಲ. ಈ ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ಬಿ ಟೀಂ ಎಂದು ಕರೆದಿದ್ದರು. ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆಯಿದೆ. ಆಮ್ ಆದ್ಮಿ ಪಕ್ಷದಿಂದ ತೊಂದರೆ ಆಗಿದೆ ಎಂಬುದು ಸರಿಯಲ್ಲ ಎಂದು ಹೇಳಿದರು.