ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿಗಾಗಿ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಲಂಚ ಪಡೆದ ವಿಚಾರವಾಗಿ ವಿಡಿಯೋ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ಶಾಸಕರೇ ಸಚಿವರಿಗೆ ಬ್ರೋಕರ್ ಗಳಾಗಿದ್ದಾರೆ. ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪರಸಪ್ಪ ಎಂಬುವವರು ತಮ್ಮ ಮಗನಿಗೆ ಪಿಎಸ್ಐ ಹುದ್ದೆ ಪರೀಕ್ಷೆ ಬರೆಸಲು ಶ್ರಮಿಸುತ್ತಿದ್ದಾಗ ಶಾಸಕ ದಡೇಸುಗೂರು ಬೆಂಬಲಿಗರು ಬಂದು ಕೆಲಸ ಮಾಡಿ ಕೊಡುವುದಾಗಿ ಹೇಳಿ ಪರಸಪ್ಪ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಸಕರು ಕಳೆದ ಆಗಸ್ಟ್ ನಲ್ಲಿ ಶಾಸಕರ ಭವನಕ್ಕೆ ಕರೆದೊಯ್ದು ಅಲ್ಲಿಂದ ತಮ್ಮ ಕಾರಿನಲ್ಲಿಯೇ ಪರಸಪ್ಪ ಅವರನ್ನು ಕರೆದೊಯ್ದು 30 ಲಕ್ಷ ರೂಪಾಯಿಗೆ ಫಿಕ್ಸ್ ಮಾಡಿದ್ದಾರೆ. 15 ಲಕ್ಷ ರೂ. ಮೊದಲ ಕಂತಿನ ಹಣವಾಗಿ ಪರಸಪ್ಪ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತ; ಅವರೇ ವಿಡಿಯೋದಲ್ಲಿ ತಿಳಿಸಿದ್ದಾರೆ.
ವಿಧಾನಸೌಧ ಈಗ ವ್ಯಾಪಾರ ಸೌಧವಾಗಿದೆ. ವಿಧಾನಸೌಧದ ಎದುರೇ ಶಾಸಕರು ಡೀಲ್ ಮಾಡುತ್ತಿದ್ದಾರೆ. ಅಂದರೆ ವಿಧಾನಸೌಧ ವ್ಯಾಪಾರ ಸೌಧವಾಗಿಲ್ಲವೇ? ಹಣ ಕೊಟ್ಟರೂ ಕೆಲಸ ಯಾಕೆ ಮಾಡಿಕೊಡುತ್ತಿಲ್ಲ ಎಂದು ಪರಸಪ್ಪ ಕೇಳಿದಾಗ ಶಾಸಕರು ಸರ್ಕಾರಕ್ಕೆ ಕೊಟ್ಟಿದ್ದೇನೆ ಎನ್ನುತ್ತಾರೆ. ಅಂದರೆ ಶಾಸಕರು ಯಾರಿಗೆ ಹಣ ಕೊಟ್ಟಿದ್ದಾರೆ. ಅಂದು ಗೃಹಮಂತ್ರಿ ಇದ್ದವರು ಯಾರು? ಆಗಿನ ಅಧಿಕಾರಿಗಳು ಯಾರಿದ್ದರು? ಸರ್ಕಾರಕ್ಕೆ ಕೊಟ್ಟಿದ್ದೀರಾ ಎಂದರೆ ವಿಧಾನಸೌದಕ್ಕೆ ಕೊಟ್ಟಿದ್ದಾರೆ ಅಂತ ಅರ್ಥ. ಕಲಸವನ್ನೂ ಮಾಡಿಕೊಡದೇ ಹಣವನ್ನೂ ಹಿಂತಿರುಗಿಸದೇ ಇದ್ದಾಗ ಪರಸಪ್ಪ ಮತ್ತೆ ಮತ್ತೆ ಶಾಸಕರನ್ನು ಹಣ ವಾಪಸ್ ಕೊಡಲು ಕೇಳಿದ್ದಾರೆ. ಆಗಲೇ ಇಷೆಲ್ಲ ಹಗರಣಗಳು ಹೊರಗೆ ಬಂದಿವೆ ಎಂದು ಹೇಳಿದರು.
ಇಲ್ಲಿ ಸ್ಪಷ್ಟವಾಗಿ ಗೋಚರಿಸುವುದು ಬಿಜೆಪಿ ಶಾಸಕರು ಸಚಿವರಿಗೆ ಬ್ರೋಕರ್ಸ್ ಆಗಿದ್ದಾರೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಇಂದು ಭ್ರಷ್ಟ ಜನತಾ ಪಕ್ಷವಾಗಿ ಪರಿವರ್ತನೆಯಾಗಿದೆ. ಈಗ ಬಿಜೆಪಿ ಶಾಸಕರೆಲ್ಲ ಬ್ರೋಕರ್ ಜನತಾ ಪಕ್ಷದವರಾಗಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಆಡಿಯೋ ತನ್ನದೇ ಎಂದು ಹೇಳಿದರೂ ಯಾಕೆ ಶಾಸಕರಿಗೆ ಈವರೆಗೆ ನೋಟೀಸ್ ಕೊಟ್ಟಿಲ್ಲ. ಸಿಎಂ ಬೊಮ್ಮಾಯಿಯವರು ಕರೆದು ಯಾಕೆ ಇನ್ನೂ ವಿಚಾರಿಸಿಲ್ಲ? ಇಷ್ಟೆಲ್ಲ ಆಗಿದ್ದರೂ ಮೊನ್ನೆ ಸಿಎಂ ಘಂಟಾಘೋಷವಾಗಿ ಧೈರ್ಯ ಇದ್ರೆ…… ತಾಕತ್ತಿದ್ರೆ……ಧಮ್ಮಿದ್ರೆ ಬಿಜೆಪಿಯನ್ನು ತಡೆಯಿರಿ ಎಂದು ಕೂಗುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ, ಧಮ್ಮಿದ್ರೆ ನಿರುದ್ಯೋಗಿ ಯುವಕರ ಬಳಿ ಹೋಗಿ ನಿಮ್ಮ ಶಾಸಕರು 15 ಲಕ್ಷ ಹಣ ಯಾಕೆ ಪಡೆದರು? ಯಾಕೆ ಸರ್ಕಾರ ಎಲ್ಲಾ ಹುದ್ದೆಗಳನ್ನು ಮಾರಿಕೊಂಡಿದೆ ಎಂದು ಹೇಳಿ. ಎರಡುವರೆ ಮೂರು ವರ್ಷಗಳಾದರೂ ನಿಮ್ಮ ಯೋಗ್ಯತೆಗೆ ಒಬ್ಬರೇ ಒಬ್ಬರಿಗೆ ನೌಕರಿ ಕೊಡಿಸಲು ಆಗಿಲ್ಲ. ಆದ್ರೂ ತಾಕತ್ತು, ಧಮ್ಮು ಇದನ್ನೆಲ್ಲ ಮಾತನಾಡುತ್ತೀರಾ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.