ಬೆಂಗಳೂರು: ರಾಜ್ಯಕ್ಕೆ ಎರಡು ದಿನಗಳ ಪ್ರವಾಸಕ್ಕಾಗಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ಕರುನಾಡ ಜನತೆಯ ಗಮನ ಸೆಳೆದರು.
ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು, ಬೆಂಗಳೂರಿನ ಮಹಾ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ್ದು ಮಹತ್ವದ್ದಾಗಿತ್ತು.
ಇಂದು ಕರ್ನಾಟಕಕ್ಕೆ ಮಹತ್ವದ ದಿನವಾಗಿದೆ. 5 ನ್ಯಾಷನಲ್ ಹೈವೆ ಯೋಜನೆ, 7 ರೈಲ್ವೆ ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಿದ್ದೇನೆ. ಹಲವು ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇವೆಲ್ಲವೂ ರಾಜ್ಯದ ಯುವ ಜನ, ಮಧ್ಯಮ ವರ್ಗ, ರೈತರಿಗೆ ನೆರವು ನೀಡುತ್ತವೆ. ಹೊಸ ಯೋಜನೆಗಳು ಹೈಯರ್ ಎಜುಕೇಷನ್, ರಿಸರ್ಚ್, ಸ್ಕಿಲ್ ಡೆವಲಪ್ ಮೆಂಟ್, ಕನೆಕ್ಟಿವಿಟಿ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಸಹಕಾರಿಯಾಗಲಿದೆ ಎಂದರು.
ಬೆಂಗಳೂರು ಲಕ್ಷಾಂತರ ಜನರ ಕನಸಿನ ನಗರಿಯಾಗಿದೆ. ಕಳೆದ 8 ವರ್ಷಗಳಲ್ಲಿ ಬೆಂಗಳೂರಿನ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಲು ಡಬಲ್ ಎಂಜಿನ್ ಸರ್ಕಾರ ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿಯೇ ಬೆಂಗಳೂರು ಆರ್ಥಿಕ ಕೇಂದ್ರ ಬಿಂದು. ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಹಲವು ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು. ನಮ್ಮ ಸರ್ಕಾರ ಕೇವಲ 40 ತಿಂಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಿದೆ. 21ನೇ ಶತಮಾನದಲ್ಲಿ ರೈಲ್ವೆ, ಬಸ್, ವಿಮಾನ ಮಾತ್ರವಲ್ಲ ಮಲ್ಟಿಮಾಡೆಲ್ ಕನೆಕ್ಟಿವಿಟಿಯ ಬಗ್ಗೆ ಒತ್ತು ನೀಡಲಾಗುತ್ತಿದೆ. ಬೆಂಗಳೂರು ಆತ್ಮನಿರ್ಭರ್ ಶಕ್ತಿಗೆ ಪ್ರೇರಣೆ ನೀಡಿದೆ. ಒಂದು ಭಾರತ ಶ್ರೇಷ್ಠ ಭಾರತ ಸಾಲಿಗೆ ಬೆಂಗಳೂರು ಮಾದರಿ. 8 ವರ್ಷಗಳಲ್ಲಿ ನೂರಕ್ಕು ಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳು ತಲೆಯೆತ್ತಿವೆ. ಭಾರತೀಯ ಯುವಜನತೆ ಮನಸು ಮಾಡಿದರೆ ಎಲ್ಲವನ್ನು ಸಾಧಿಸಬಲ್ಲರು ಎಂದರು.