ಬೆಂಗಳೂರು: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಓರ್ವ ಸುಳ್ಳಿನ ರಾಜ. ನನ್ನ ಕ್ಷೇತ್ರಕ್ಕೆ 650 ಕೋಟಿ ರೂಪಾಯಿ ಅನುದಾನವೇ ಬಿಡುಗಡೆಯಾಗಿಲ್ಲ. ನನ್ನ ವಿರುದ್ಧದ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಸವಾಲು ಹಾಕಿದ್ದಾರೆ.
ತಮ್ಮ ವಿರುದ್ಧ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಮಾಡಿರುವ 30% ಕಮಿಷನ್ ಆರೋಪ ಹಾಗೂ 650 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಹೆಬ್ಬಾಳ ಕ್ಷೇತ್ರದಲ್ಲಿ ಶೇ.40ರಷ್ಟು ಮಾತ್ರ ಕಾಮಗಾರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೈರತಿ ಸುರೇಶ್, ಕಮಿಷನ್ ತೆಗೆದುಕೊಂಡು ಜೀವನ ಮಾಡುವ ದುಸ್ಥಿತಿ ನನಗೆ ಬಂದಿಲ್ಲ, ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದು ಕೇವಲ 90 ಕೋಟಿ ಮಾತ್ರ ಅನುದಾನ ಬಿಡುಗಡೆಯಾಗಿದೆ. ಸರ್ಕಾರ ನೀಡಿರುವ ಅನುದಾನ ಕಾಮಗಾರಿ ಆರಂಭಿಸಲು ಸಾಲುವುದಿಲ್ಲ. ಹೀಗಿರುವಾಗ ಅಧಿಕಾರಿಗಳು ಭ್ರಷ್ಟಾಚಾರ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ಶಾಸಕನ ಕ್ಷೇತ್ರಕ್ಕೆ 650 ಕೋಟಿ ಅನುದಾನ ಯಾರು ಕೊಡುತ್ತಾರೆ? ಒಂದು ವೇಳೆ 650 ಕೋಟಿ ಅನುದಾನ ಬಂದಿದ್ದೇ ಆದರೆ ಹೆಬ್ಬಾಳ ಕ್ಷೇತ್ರವನ್ನು ಸಿಂಗಾಪುರ ಮಾಡಿಬಿಡುತ್ತಿದ್ದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನನ್ನ ಕ್ಷೇತ್ರಕ್ಕೆ 600 ಅಲ್ಲ 300 ಕೋಟಿ ಅನುದಾನ ಬಿಡುಗಡೆಯಾಗಿರುವುದು ಸಾಬೀತಾದರೂ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ನನಗೆ ಬಂದ ಅನುದಾನ ಕೇವಲ 90 ಕೋಟಿ ರೂ. ಮಾತ್ರ. ಬಂದಿರುವ ಅನುದಾನ ಕಾಮಗಾರಿಗೆ ಸಾಲುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ನನ್ನ ಸ್ವಂತ ಹಣದಿಂದ ಖರ್ಚು ಮಾಡಿದ್ದೇನೆ. ಓರ್ವ ಭ್ರಷ್ಟಾತಿಭ್ರಷ್ಟ ಮಾಜಿ ಸಚಿವರಿಂದ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಸಿಕೊಳ್ಳುತ್ತಿರುವುದೇ ದುರ್ದೈವ, 40 ಕೇಸ್ ಗಳನ್ನು ತನ್ನ ವಿರುದ್ಧ ಹೊತ್ತಿರುವ ಮಾಜಿ ಶಾಸಕರು, ಮಾಜಿ ಸಚಿವರಾಗಿರುವ ಕಟ್ಟಾ, ಅನಾರೋಗ್ಯದಿಂದಾಗಿ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅಂತವರಿಂದ ಆರೋಪ ಕೇಳಿಬರುತ್ತಿರುವುದೇ ಬೇಸರದ ಸಂಗತಿ ಎಂದು ಹೇಳಿದರು.