ಬೆಂಗಳೂರು: ವಿಧಾನಸಭೆಯಲ್ಲಿ ಹಲವು ಮಹತ್ವದ ವಿಧೇಯಕಗಳು ಮಂಡನೆಯಾಗಿದ್ದು, ಪ್ರಮುಖವಾಗಿ ಕನ್ನಡ ಭಾಷೆ ಕಡ್ಡಾಯ ನಿಟ್ಟಿನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಲಾಗಿದೆ.
ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಲಾಗಿದ್ದು, ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿಗೆ ಅವಕಾಶ ನೀಡಲಾಗಿದೆ.
ಅಧೀನ ನ್ಯಾಯಾಲಯ, ನ್ಯಾಯಾಧಿಕಾರ ಹಾಗೂ ಇತರೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಗೆ, ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಕೈಗಾರಿಕಾ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ, ಕನ್ನಡ ಮೇಲ್ವಿಚಾರಣೆಗೆ ಸಮಿತಿ ಸ್ಥಾಪನೆಗೆ ಅವಕಾಶ ಕೊಡಲಾಗಿದೆ. ಕನ್ನಡ ಭಾಷೆ ಅನುಷ್ಠಾನ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮೊದಲ ತಪ್ಪಿಗೆ 5 ಸಾವಿರ ಹಾಗೂ ಎರಡನೇ ಬಾರಿ ತಪ್ಪು ಮಾಡಿದರೆ 10 ಸಾವಿರ ಹಾಗೂ ಮೂರನೇ ಬಾರಿಯೂ ತಪ್ಪು ಮಾಡಿದರೆ 20 ಸಾವಿರ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.