ಬೆಳಗಾವಿ: ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿ ಮೇಲೆ ಮರಾಠಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಪ್ರಕರಣದ ಬೆನ್ನಲ್ಲೇ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಮರಾಠಿ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಕನ್ನಡ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದ ಟಿಳಕವಾಡಿ ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿ ಸುದ್ದಿಗಾರರೊಂದಿಗೆ ಮಾತನಾಡಿ, ಠಾಣೆಗೆ ಕರೆದೊಯ್ದು ವಿಚಾರಣೆ ನೆಪದಲ್ಲಿ ತನ್ನನ್ನು ಪೊಲೀಸರು ಥಳಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬಾಯಿಗೆ ಬಂದಂತೆ ಬೈದಿದ್ದಲ್ಲದೇ, ಡಿಸಿಪಿ ಹಾಗೂ ಎಸಿಪಿಗಳು ಥಳಿಸಿದ್ದಾರೆ ಎಂದು ದೂರಿದ್ದಾನೆ.
ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಎಂಎಲ್ಸಿ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.