ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಭಾಷಾ ವಿವಾದ ಇದೀಗ ಕಾಲೇಜಿಗೂ ಕಾಲಿಟ್ಟಿದ್ದು, ಕನ್ನಡ ಬಾವುಟ ಹಿಡಿದಿದ್ದ ವಿದ್ಯಾರ್ಥಿಗಳ ಮೇಲೆ ಮರಾಠಿ ಸಹಪಾಠಿಗಳಿಂದಲೇ ಹಲ್ಲೆ ನಡೆದ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಬೆಳಗಾವಿಯ ಗೋಗಟೆ ಕಾಲೇಜಿನ ಇಂಟರ್ ಕಾಲೇಜು ಫೆಸ್ಟ್ ನಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ನಿನ್ನೆ ಕಾಲೇಜು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಮರಾಠಿ ಪುಂಡ ವಿದ್ಯಾರ್ಥಿಗಳು ಕನ್ನಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಘಟನೆ ಬೆನ್ನಲ್ಲೇ ಕಾಲೇಜು ಹಾಗೂ ಸುತ್ತಮುತ್ತ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಇಂದು ಕಾಲೇಜಿಗೆ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗೋಗಟೆ ಪಿಯು ಕಾಲೇಜಿಗೆ ರಜೆ ಘೋಷಿಸಲಾಗಿದ್ದು, ಕಾಲೇಜು ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ ಕಾಲೇಜಿನತ್ತ ನುಗ್ಗಿರುವ ಕರವೇ ಕಾರ್ಯಕರ್ತರು ಗೋಗಟೆ ಕಾಲೇಜು ಮುಂಭಾಗ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಮರಾಠಿ ಪುಂಡ ವಿದ್ಯಾರ್ಥಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.