ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಚಾಮುಂಡೇಶ್ವರಿಗೆ ನನ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.
ದಸರಾ ಆಚರಣೆಯನ್ನು ಋಷಿ ಮುನಿಗಳು ಆಚರಿಸಿ ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದಾರೆ. ದೇಶದಲ್ಲಿ ಯತಿ ಮುನಿಗಳು ಸಂಸ್ಕೃತಿಯನ್ನು ರಕ್ಷಿಸಿ ಮುಂದುವರೆಯುವಂತೆ ಮಾಡಿದ್ದಾರೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಹಬ್ಬ ಹಲವು ಸಂಸ್ಕೃತಿಯೊಂದಿಗೆ ಬೆಸೆದಿದೆ. ಇಲ್ಲಿ ಮಹಿಷಾಸುರನ ವಧೆಯಾಗಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಕರ್ನಾಟಕದ ಭಕ್ತಿ ಸಮಾನತೆಯನ್ನು ಎಲ್ಲೆಡೆ ಪಸರಿಸಲಾಗುತ್ತಿದೆ. ಮಹಿಷ ಮರ್ಧನದ ಮೂಲಕ ಮಹಿಳೆಯರ ಸಾಮರ್ಥ್ಯ ಪರಿಚಯಿಸಲಾಗಿದೆ. ಮಹಿಳೆ ಶಾಂತಿ, ಶಕ್ತಿ, ಶೌರ್ಯದ ಸಂಕೇತ ಎಂದು ಬಿಂಬಿತಳಾಗಿದ್ದಾಳೆ. ಮಹಿಳೆಯ ಪ್ರಾಧಾನ್ಯತೆಯೇ ದಸರೆಯ ವಿಶೇಷ ಎಂದು ಹೇಳಿದರು.
ಮೈಸೂರು ದಸರಾ ಮುಂದುವರೆದಿರುವುದು ಹೆಮ್ಮೆಯ ವಿಚಾರ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ವೀರ ವನಿತೆಯರ ಹೋರಾಟವನ್ನು ನೆನೆದ ರಾಷ್ಟ್ರಪತಿಗಳು, ಬಸವಣ್ಣನವರ ಅನುಭವ ಮಂಟಪ, ಅಲ್ಲಮ ಪ್ರಭುಗಳ ಆದರ್ಶದ ಬಗ್ಗೆಯೂ ಸ್ಮರಿಸಿದರು. ಬಸವಣ್ಣನವರ ವಚನ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಹೇಳಿದರು.