ಬೆಂಗಳೂರು: ಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಬಿಜೆಪಿ ಸರ್ಕಾರದ ಕಣ್ಣೊರೆಸುವ ತಂತ್ರ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ 5 ವರ್ಷಗಳ ಕಾಲ ಅವರ ಕಡೆಗೆ ತಿರುಗಿಯೂ ನೋಡಿರಲಿಲ್ಲ ಎಂಬುದು ನೆನಪಿರಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪರಿಶಿಷ್ಟ ಸಮುದಾಯಗಳತ್ತ ಸಿದ್ದರಾಮಯ್ಯನವರು ಕಣ್ಣೊರೆಸುವುದಿರಲಿ, 5 ವರ್ಷಗಳ ಕಾಲ ಅವರ ಕಡೆ ತಿರುಗಿಯೂ ನೋಡಿರಲಿಲ್ಲ. ಒಳ ಮೀಸಲಾತಿ ಕುರಿತ ವರದಿಯನ್ನು ತೆಗೆದು ನೋಡುವ ಧೈರ್ಯಯೂ ಅವರಿಗೆ ಇರಲಿಲ್ಲ. ಸಮುದಾಯದವರು ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಿದ್ದರು. ಸಮಾವೇಶದಲ್ಲಿ ಸಿದ್ದರಾಮಯ್ಯ ಬರೀ ದೀಪ ಹಚ್ಚಿ ಮಾತನಾಡದೆ ಬಂದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಗುಡುಗಿದರು.
ನಮ್ಮ ಬದ್ಧತೆ ಏನೆಂಬುದು ಎಲ್ಲಾ ಸಮುದಾಯಗಳಿಗೆ ಗೊತ್ತಿದೆ. ಕಾನೂನು ಸ್ಥಾನಮಾನಗಳ ಬಗ್ಗೆಯೂ ನಮಗೆ ತಿಳಿದಿದೆ. ಇಂಥ ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕಿದೆ ಎಂದನ್ನು ನಾವು ಈಗಾಗಲೇ ತೋರಿಸಿಕೊಟ್ಟಿದ್ದೇವೆ. ಇನ್ನೊಬ್ಬರ ಬಗ್ಗೆ ಮಾತನಾಡುವದಕ್ಕಿಂತ ಮೊದಲು ಸಿದ್ದರಾಮಯ್ಯ ಪ್ರತಿ ಬಾರಿ ಹಿಂತಿರುಗಿ ನೋಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.