ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಸಂಭವಿಸಲಿದ್ದ ಭಾರಿ ಭಯೋತ್ಪಾದಕ ಕೃತ್ಯವೊಂದು ಸ್ವಲ್ಪದರಲ್ಲಿ ತಪ್ಪಿದೆ. ಬೇರೆಡೆ ಕೊಂಡೊಯ್ಯುತ್ತಿದ್ದ ಬಾಂಬ್ ನಾಗುರಿ ಬಳಿ ಸ್ಫೋಟಗೊಂಡಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ನವೆಂಬರ್ 19ರಂದು ಸಂಜೆ 4:40ರ ಸುಮಾರಿಗೆ ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದು, ಆಟೋಚಾಲಕ ಹಾಗೂ ಶಂಕಿತ ಪ್ರಯಾಣಿಕ ಇಬ್ಬರೂ ಗಾಯಗೊಂಡಿದ್ದಾರೆ. ಶಂಕಿತ ಗಾಯಾಳು ಶಾರಿಕ್ ಎಂದು ಕುಟುಂಬದವರು ಗುರುತಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದರು.
ಶಾರಿಕ್ ನಕಲಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಬಳಸಿ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪ್ರೇಮ್ ರಾಜ್ ಎಂಬುವವರ ಆಧಾರ್ ಕಾರ್ಡ್ ದುರ್ಬಳಕೆ ಮಾಡಿದ್ದ. ಪ್ರೇಮ್ ರಾಜ್ ಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಲು ಶಾರಿಕ್ ಹಲವೆಡೆಗಳಲ್ಲಿ ಪರಿಶೀಲಿಸಿದ್ದ ಬಗ್ಗೆ ಗೊತ್ತಾಗಿದೆ. ಇನ್ನು ಆತ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿಯೂ ಹಲವು ವಸ್ತುಗಳು ಪತ್ತೆಯಾಗಿವೆ. ಶಾರಿಕ್ ಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆ ಜೊತೆ ನಂಟು ಇರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.