ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರಿಗೆ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ಕಂದಾಯ ಇಲಾಖೆ ಎಸ್ ಡಿ ಎ ಅಧಿಕಾರಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಎಸ್ ಡಿ ಎ ಇರ್ಫಾನ್ ಉಲ್ಲಾಖಾನ್ ವಿರುದ್ಧ ಕೆ ಆರ್ ಪುರದ ತಹಶೀಲ್ದಾರ್ ಅಜಿತ್ ರೈ ದೂರು ನೀಡಿರುವ ಹಿನ್ನೆಲೆಯಲ್ಲಿ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಮಳ್ಳೂರು ಗ್ರಾಮದ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಇರ್ಫಾನ್ ವಿರುದ್ಧ ಕೇಳಿ ಬಂದಿದೆ. ಇರ್ಫಾನ್, ಕೆ ಆರ್ ಪುರಂ ಕಂದಾಯ ಇಲಾಖೆ ದಾಖಲೆ ವಿಭಾಗದಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಪಿ ವಿರುದ್ಧ ಈಗಾಗಲೇ ಎರಡು ಎಫ್ಐಆರ್ ದಾಖಲಾಗಿದೆ. ಇದೀಗ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ
ಪ್ರಕರಣ ದಾಖಲಾಗುತ್ತಿದ್ದಂತೆ ಇರ್ಫಾನ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.