ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳು ಹೆಚ್ಚು ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಅವುಗಳು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ಸಹ ವರದಿಯಾಗುತ್ತಿದ್ದು, ಹೀಗಾಗಿ ಇದರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಮತ್ತೊಂದು ದುರಂತ ನಡೆದಿದ್ದು, ಕಂಟೇನರ್ ಒಳಗಿದ್ದ 20 ಎಲೆಕ್ಟ್ರಿಕ್ ಬೈಕುಗಳು ಸುಟ್ಟು ಭಸ್ಮವಾಗಿವೆ.
ನಾಸಿಕ್ ನಲ್ಲಿರುವ ಜಿತೇಂದ್ರ ಎಲೆಕ್ಟ್ರಿಕ್ ವೆಹಿಕಲ್ಸ್ ಫ್ಯಾಕ್ಟರಿಯಿಂದ 40 ಎಲೆಕ್ಟ್ರಿಕ್ ಬೈಕುಗಳನ್ನು ಹೊತ್ತ ಕಂಟೇನರ್ ಬೆಂಗಳೂರಿಗೆ ಹೊರಟಿದ್ದು, ಮೇಲಿನ ಸಾಲಿನಲ್ಲಿ 20 ಹಾಗೂ ಕೆಳಗಿನ ಸಾಲಿನಲ್ಲಿ 20 ಬೈಕುಗಳು ಇದ್ದವು.
ಕಂಟೇನರ್ ಹೊರಟ ಸ್ವಲ್ಪ ಹೊತ್ತಿನಲ್ಲೇ ಮೇಲಿನ ಸಾಲಿನಲ್ಲಿದ್ದ 20 ಬೈಕುಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.