ಪೂಜ್ಯ ಸಂತರಾದ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಶ್ರೀ ಕಂಚಿ ಕಾಮಕೋಟಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಅವರು ದೇವಾಲಯದಲ್ಲಿ ಸಮಯ ಕಳೆದಿದ್ದಾರೆ. ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟು ರುದ್ರಾಕ್ಷಿ ಮಾಲೆ ತೊಟ್ಟಿದ್ದು ವಿಶೇಷವಾಗಿತ್ತು.
ಎರ್ನಾಕುಲಂ ಜಿಲ್ಲೆಯ ಕಾಲಡಿ ಗ್ರಾಮದಲ್ಲಿ ಶಂಕರಾಚಾರ್ಯರ ಜನ್ಮಸ್ಥಳವಿದೆ. ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಪ್ರಧಾನಿ ಹಂಚಿಕೊಂಡಿದ್ದಾರೆ. ಮಹಾನ್ ಸಂತರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಅವರು ನೀಡಿದ ಕೊಡುಗೆಗಳಿಗಾಗಿ ಮುಂದಿನ ಪೀಳಿಗೆಗಳು ಅವರಿಗೆ ಋಣಿಯಾಗಿರುತ್ತವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಸುಮಾರು 45 ನಿಮಿಷಗಳ ಕಾಲ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಗುರುವಾರ ಕೇರಳಕ್ಕೆ ಆಗಮಿಸಿದ್ದರು. ನಂತರ ಸಮೀಪದ ನೆಡುಂಬಸ್ಸೆರಿಯ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ರು. ಅಲ್ಲಿಂದ ಕಾಲಡಿಗೆ ಪ್ರಯಾಣ ಬೆಳೆಸಿದ್ರು.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಭಾರತಕ್ಕೆ ಸಂತ ದಾರ್ಶನಿಕರು ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಅದ್ವೈತ ತತ್ವಕ್ಕೆ ಹೆಸರಾದ ಆದಿ ಶಂಕರ ಪರಂಪರೆಯನ್ನು ಮೆಚ್ಚಿಕೊಂಡರು. ಕೇರಳದ ಪ್ರಮುಖ ಆಧ್ಯಾತ್ಮಿಕ ನಾಯಕರಾದ ಶ್ರೀ ನಾರಾಯಣ ಗುರು, ಚಟ್ಟಂಪಿ ಸ್ವಾಮಿಕಲ್ ಮತ್ತು ಸಮಾಜ ಸುಧಾರಕರನ್ನು ನೆನೆದರು.