ಬ್ರಿಟನ್ನ ಸೆಕ್ಯೂರಿಟಿ ಏಜೆನ್ಸಿಯು ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರದ ಉಪ ಪ್ರಭೇದವನ್ನು ಪತ್ತೆ ಮಾಡಿದೆ. ಈ ಉಪವಂಶಾವಳಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ ಎಂದು ಬ್ರಿಟನ್ನ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿಯು ಹೇಳಿದೆ.
ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಬಲ್ಲ ಓಮಿಕ್ರಾನ್ನೊಂದಿಗೆ ಕಂಡುಬರುವ ನಿರ್ದಿಷ್ಟ ರೂಪಾಂತರವನ್ನು ಹೊಂದಿಲ್ಲದ BA.2 ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಯುತ್ತಿವೆ ಎಂದು ಬ್ರಿಟನ್ನ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿಯು ಮಾಹಿತಿ ನೀಡಿದೆ.
ಈಗಾಗಲೇ ಓಮಿಕ್ರಾನ್ ರೂಪಾಂತರಿಯಿಂದಾಗಿ ವಿಶ್ವಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದೇಶದಲ್ಲೂ ಕೊರೊನಾ ಮೂರನೇ ಅಲೆಯ ಭಯ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಓಮಿಕ್ರಾನ್ನ ಹೊಸ ಪ್ರಭೇದ ಕೂಡ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬ್ರಿಟನ್ನಲ್ಲಿ ಓಮಿಕ್ರಾನ್ ಉಪ ಪ್ರಬೇಧವಾದ BA.2 ಸೋಂಕಿನ 426 ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ಕೇವಲ ಬ್ರಿಟನ್ ಮಾತ್ರವಲ್ಲದೇ ಭಾರತ, ಸ್ವೀಡನ್, ಡೆನ್ಮಾರ್ಕ್ಗಳಲ್ಲಿ ಈ ಹೊಸ ಪ್ರಭೇದವು ಪತ್ತೆಯಾಗಿದೆ. ಯುಕೆಎಚ್ಎಸ್ಎ ನೀಡಿರುವ ಮಾಹಿತಿಯ ಪ್ರಕಾರ ವಿಶ್ವದ 40 ರಾಷ್ಟ್ರಗಳಲ್ಲಿ ಈಗಾಗಲೇ ಬಿಎ.2 ಉಪಪ್ರಬೇಧದ ಪ್ರಕರಣಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ .