ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಸೇರಿದಂತೆ ಅನೇಕ OTT ಪ್ಲಾಟ್‌ಫಾರ್ಮ್ಗಳಲ್ಲಿ ಸೆನ್ಸಾರ್ ಇಲ್ಲದೇ ದೃಶ್ಯಗಳು ಪ್ರಸಾರವಾಗುತ್ತವೆ. ಆದ್ರೆ ಇನ್ಮೇಲೆ ಅಶ್ಲೀಲತೆ ಮತ್ತು ಹಿಂಸೆಯ ದೃಶ್ಯಗಳಿಗೆ ಕತ್ತರಿ ಹಾಕಬೇಕಾಗಬಹುದು. ಮೂಲಗಳ ಪ್ರಕಾರ, ಭಾರತ ಸರ್ಕಾರವು OTT ಕಂಪನಿಗಳಿಗೆ ಇದನ್ನು ಕಡ್ಡಾಯ ಮಾಡಲಿದೆ. ದೃಶ್ಯಗಳನ್ನು ಪ್ರಸಾರ ಮಾಡುವ ಮುನ್ನ ಅಶ್ಲೀಲತೆ ಮತ್ತು ಹಿಂಸಾತ್ಮಕ ವಿಡಿಯೋಗಳ ಸಂಬಂಧ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದೆ.
OTT ಅಥವಾ ಸ್ಟ್ರೀಮಿಂಗ್ ಕಂಪನಿಗಳು ಈ ಸಂಬಂಧ ಜೂನ್ 20 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಸಭೆ ನಡೆಸಿವೆ. ಈ ಕುರಿತು ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. OTT ಪ್ಲಾಟ್‌ಫಾರ್ಮ್‌ನಲ್ಲಿ ಅಶ್ಲೀಲತೆ ಮತ್ತು ಅಶ್ಲೀಲ ವಿಷಯಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಸಂಸತ್ ಸದಸ್ಯರು, ನಾಗರಿಕ ಗುಂಪುಗಳು ಮತ್ತು ಸಾರ್ವಜನಿಕರ ಪರವಾಗಿ ಆಕ್ಷೇಪಣೆಗಳು ವ್ಯಕ್ತವಾದವು. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಭಾರತದಲ್ಲಿ ಪ್ರಚಂಡ ಜನಪ್ರಿಯತೆಯನ್ನು ಗಳಿಸಿವೆ. ಇವೆರಡೂ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ಹೊಂದಿವೆ. 2027ರ ವೇಳೆಗೆ ದೇಶದ ಸ್ಟ್ರೀಮಿಂಗ್ ಮಾರುಕಟ್ಟೆಯ ಮೌಲ್ಯ 7 ಬಿಲಿಯನ್ ಡಾಲರ್‌ಗೆ ಏರಲಿದೆ. ಓಟಿಟಿ ಮೇಲೆ ಕಣ್ಣಿಡಲು ಸ್ವತಂತ್ರ ಸಮಿತಿಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಅನುಚಿತ ವಿಷಯವನ್ನು ಗುರುತಿಸಿ ತೆಗೆದು ಹಾಕಲು ಸಮಿತಿ ಸಹಕರಿಸಲಿದೆ. ಸ್ಟ್ರೀಮಿಂಗ್ ವಿಚಾರದಲ್ಲಿ ನೀತಿ ಸಂಹಿತೆಯನ್ನು ಅನುಸರಿಸಲು ಕೇಂದ್ರ ಸರ್ಕಾರ ಒತ್ತಾಯಿಸಿದೆ.