ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದ 119 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಯಾತ್ರೆ ಮುಗಿಸಿ ಬಂದ ಪೋಷಕರ ಸಂಪರ್ಕದಲ್ಲಿದ್ದ ಮಕ್ಕಳಿಗೂ ಸೋಂಕು ಹರಡಿದ್ದು, ಮೂರು ಮಕ್ಕಳಿಗೆ ಪಾಸಿಟಿವ್ ಬಂದಿದೆ.
ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿ ಮಂಡ್ಯ ಜಿಲ್ಲೆಗೆ ವಾಪಸ್ ಆಗಿದ್ದ 89 ಜನರಲ್ಲಿ ನಿನ್ನೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಓಂ ಶಕ್ತಿಯಿಂದ ವಾಪಸ್ ಆದ ಎಲ್ಲಾ ಯಾತ್ರಾರ್ಥಿಗಳನ್ನು ಮಳವಳ್ಳಿ ಕೆ ಎಸ್ ಆರ್ ಟಿ ಸಿ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ನೆಗೆಟಿವ್ ಬಂದವರಿಗೂ 7 ದಿನಗಳ ಕಡ್ಡಾಯ ಕ್ವಾರಂಟೈನ್ ಗೆ ಜಿಲ್ಲಾಡಳಿತ ಸೂಚಿಸಿದೆ.
ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಓಂ ಶಕ್ತಿ ದೇವಸ್ಥಾನದಿಂದ ಆಗಮಿಸಿದ 6 ಯಾತ್ರಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ ಭೀತಿ ಎದುರಾಗಿದೆ.