ಬೆಂಗಳೂರು: ರಾಜ್ಯದಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ನಡುವೆಯೇ ಮತ್ತೆ ಡೆಲ್ಟಾ ವೈರಸ್ ಆತಂಕ ಕೂಡ ಹೆಚ್ಚುತ್ತಿದೆ. ಅಲ್ಲಲ್ಲಿ ಡೆಲ್ಟಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈಗಾಗಲೇ ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ಇಬ್ಬರಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, ಅವರಲ್ಲಿ ಒಬ್ಬರಲ್ಲಿ ಭಿನ್ನ ಮಾದರಿಯ ವೈರಸ್ ಪತ್ತೆಯಾಗಿದೆ. ವರದಿ ಬಂದ ಬಳಿಕ ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು. ರಾಜ್ಯಕ್ಕೆ ಒಮಿಕ್ರಾನ್ ತಳಿ ಬಂದಿದ್ಯಾ ಎಂದು ಗಮನಹರಿಸಲಾಗುತ್ತಿದೆ. ಈಗಿರುವ ಡೆಲ್ಟಾ ತಳಿ ಪ್ರಕರಣ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಡೆಲ್ಟಾ ಹಾಗೂ ಒಮಿಕ್ರಾನ್ ಎರಡನ್ನೂ ಕೂಡ ನಿಭಾಯಿಸಬೇಕಿದೆ. ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಐಪಿಎಲ್ 2022: ಫ್ರಾಂಚೈಸಿಯಲ್ಲಿ ಉಳಿದಿರುವ ಆಟಗಾರರಿಗೆ ಸಿಗಲಿದೆ ಇಷ್ಟು ವೇತನ..!
ರಾಜ್ಯದಲ್ಲಿ ಟೆಸ್ಟಿಂಗ್, ಟ್ರ್ಯಾಕಿಂಗ್ ಕೂಡ ಹೆಚ್ಚಿಸಲಾಗುತ್ತಿದೆ. ಕೇರಳ, ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಇನ್ನು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಪ್ರಶ್ನೆಯೇ ಇಲ್ಲ. ಜನ ಜೀವನ ಹೇಗಿದೆಯೋ ಹಾಗೆಯೇ ನಡೆಯಲಿದೆ. ಆದರೆ ಜನ ಗುಂಪು ಸೇರುವುದು ಬೇಡ. ವೈರಸ್ ಬಗ್ಗೆ ಜನರು ಎಚ್ಚೆತ್ತುಕೊಂಡು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳುವ ಮೂಲಕ ಲಾಕ್ ಡೌನ್ ವದಂತಿ ಬಗ್ಗೆ ಸಿಎಂ ಮತ್ತೆ ತೆರೆ ಎಳೆದಿದ್ದಾರೆ.