ಬೆಂಗಳೂರು: ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಒತ್ತುವರಿ ತೆರವು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಮೂಲಕವೇ ಸರ್ಕಾರದಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಡಿಸಿಎಂ, ಹಲವೆಡೆ ರಾಜಕಾಲುವೆ ಒತ್ತುವರಿಯಾದ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವ್ಯಶ್ರೀ ಅಪಾರ್ಟ್ ಮೆಂಟೇ ಇರಲಿ, ಶಿವಕುಮಾರ್ ಅಪರ್ಟ್ ಮೆಂಟೇ ಆಗಿರಲಿ ಯಾರೆ ರಾಜಕಾಲುವೆ ಒತ್ತುವರಿ ಮಾಡಿದರೂ ಕೂಡ ತೆರವುಗೊಳಿಸಲಾಗುವುದು. ಕೋರ್ಟ್ ನಿಂದ ಸ್ಟೇ ತಂದವರು ತಾವಾಗಿಯೇ ತೆರವು ಮಾಡಿದರೆ ಒಳಿತು. ಇಲ್ಲವಾದಲ್ಲಿ ನಾವು ಕೂಡ ಕಾನೂನು ಮೂಲಕವಾಗಿಯೇ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದರು.
ಮಳೆ ಬಂದಾಗ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನರು ಕಣ್ಣೀರಿಡುತ್ತಿದ್ದಾರೆ. ಇಷ್ಟಾದರೂ ರಾಜಕಾಲುವೆ ಒತ್ತುವರಿ ಮುಂದುವರೆದಿದೆ. ಎಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲು ನಾವು ಸೂಚಿಸಿಲ್ಲ. ಕಾರ್ಯಾಚರಣೆ ಮುಂದುವರೆದಿದೆ. ಖಾಸಗಿ ಡವಲಪರ್ಸ್ ಕೋರ್ಟ್ ಮೂಲಕ ಸ್ಟೇ ತಂದಿದ್ರೆ ನಾವು ನಮ್ಮ ಕ್ರಮದ ಮೂಲಕ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.