ಬೆಂಗಳೂರು: ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಕನ್ನಡಿಗರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ, ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಒಡಿಶಾದ ಬಾಲ್ ಸೋರ್ ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕನ್ನಡಿಗರು ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಎರಡು ಶವಾಗರ, ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. 750 ಜನರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಲ್ಲಿ, ಗಾಯಾಳುಗಳಲ್ಲಿ ಯಾರೂ ಕನ್ನಡಿಗರಿಲ್ಲ ಎಂದು ತಿಳಿಸಿದರು. ಇನ್ನು ಕಳಸಾದಿಂದ ಯಾತ್ರೆಗೆ ತೆರಳಿದ್ದ 110 ಜನರು ಸುರಕ್ಷಿತವಾಗಿದ್ದು, ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಪುರಿ ಜಗನ್ನಾಥ ಯಾತ್ರೆಗೆ ತೆರಳಿದ್ದ ಭಕ್ತಾದಿಗಳಿಗೂ ವಾಪಸ್ ಬರಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.