ಚಿಕ್ಕಮಗಳೂರು : ಶಾಲಾ – ಕಾಲೇಜುಗಳು ಆರಂಭವಾಗುತ್ತಿದ್ದಂತೆ ಆ ಸ್ಥಳಗಳನ್ನೇ ಕೊರೊನಾ ತನ್ನ ಹಾಟ್ ಸ್ಪಾಟ್ ಮಾಡಿಕೊಂಡಂತಿದೆ. ಈಗ ರಾಜ್ಯದಲ್ಲಿನ ಹಲವು ಶಾಲಾ – ಕಾಲೇಜುಗಳಲ್ಲಿ ಮಹಾಮಾರಿ ಸ್ಫೋಟಗೊಳ್ಳುತ್ತಿದೆ. ಆದರೆ, ಜಿಲ್ಲೆಯ ಒಂದೇ ಶಾಲೆಯಲ್ಲಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡುತ್ತಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಬಾಳೆಹೊನ್ನೂರು ಹತ್ತಿರದ ಸೀಗೋಡು ಗ್ರಾಮದಲ್ಲಿನ ಜವಾಹರ್ ನವೋದಯ ವಸತಿ ಶಾಲೆಯಲ್ಲಿಯೇ ಸೋಂಕು ಸ್ಫೋಟಗೊಂಡಿರುವುದು. ಈ ಶಾಲೆಯಲ್ಲಿ ಕೇವಲ ಮೂರೇ ದಿನಗಳಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಲ್ಲಿನ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿ ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಅಷ್ಟರಲ್ಲಿಯೇ ಸೋಂಕು ತನ್ನ ಆಟ ಆರಂಭಿಸಿದೆ. ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಶಾಲೆಯಿಂದಲೇ ಹೊರಗೆ ಬಂದಿರಲಿಲ್ಲ. ಆದರೂ ಇಲ್ಲಿ ಸೋಂಕು ಹೇಗೆ ಒಳಗೆ ನುಗ್ಗಿತು? ಎಂಬುವುದೇ ಸದ್ಯ ಎಲ್ಲರ ಯಕ್ಷ ಪ್ರಶ್ನೆಯಾಗುತ್ತಿದೆ.
ಚಂದ್ರನ ಮೇಲೆ ನಿಗೂಢ ಘನಾಕಾರದ ವಸ್ತು ಪತ್ತೆ…!
ಆರಂಭದಲ್ಲಿ ಇಲ್ಲಿನ ಮೂವರು ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆ ಶಿಕ್ಷಕರು ಶಾಲೆ ಆರಂಭವಾದಾಗಿನಿಂದ ಹೊರಗೆ ಬಂದಿರಲಿಲ್ಲ ಎನ್ನಲಾಗಿದೆ. ಸದ್ಯ ಆ ಮೂವರು ಶಿಕ್ಷಕರಿಂದ ಆರಂಭವಾದ ಸೋಂಕಿನ ಸಂಖ್ಯೆ ಈಗ ನೂರರ ಗಡಿ ದಾಟಿದೆ. ಇಲ್ಲಿಯವರೆಗೂ 93 ವಿದ್ಯಾರ್ಥಿಗಳು ಸೇರಿದಂತೆ ಶಾಲೆಯ ಒಟ್ಟು 107 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಶಾಲೆಯ ಮೈದಾನದಲ್ಲಿಯೇ ಮೂರು ಆಂಬುಲೆನ್ಸ್ ವಾಹನ ಬಿಟ್ಟಿದ್ದಾರೆ. ಶಾಲೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ಶಾಲೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಹಾಗೂ ಬಂದವರಲ್ಲಿ ಬಹುತೇಕರು ಕೊರೊನಾ ನಿಯಮ ಮರೆತಿರುವುದೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗುತ್ತಿದೆ.