ಕಳೆದ ಎರಡು ತಿಂಗಳಿನಿಂದ ಏರು ಮುಖದಲ್ಲಿದ್ದ ಅಡಿಕೆ ಧಾರಣೆ ಕೇವಲ ಒಂದು ವಾರಗಳ ಅವಧಿಯಲ್ಲಿ ಸುಮಾರು 10 ರಿಂದ 12 ಸಾವಿರ ರೂಪಾಯಿಗಳಷ್ಟು ಕುಸಿತಗೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಅಡಿಕೆ ಧಾರಣೆ ಇನ್ನಷ್ಟು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದೆರಡು ವಾರಗಳ ಹಿಂದೆ ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ 57,000 ರೂಪಾಯಿಗಳಿಂದ 58,500 ರೂಪಾಯಿಗಳ ಆಸುಪಾಸಿನಲ್ಲಿದ್ದು, ಇದೀಗ 46,000 ರೂಪಾಯಿಗಳಿಂದ 47,500 ರೂಪಾಯಿ ಆಸುಪಾಸಿಗೆ ಕುಸಿತ ಕಂಡಿದೆ. ಒಂದೆರಡು ವಾರಗಳ ಅವಧಿಯಲ್ಲಿ 10,000 ರೂಪಾಯಿ ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ.
ಆದರೆ ಕೆಲವೊಬ್ಬರು ವರ್ತಕರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುವ ಕಾರಣಕ್ಕೆ ಈ ಏರಿಳಿತ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಡಿಕೆ ಧಾರಣೆ ಇನ್ನಷ್ಟು ಇಳಿಕೆಯಾಗಬಹುದು ಎಂಬ ಆತಂಕದಿಂದ ಬೆಳೆಗಾರರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಆದರೆ ಈ ಬಾರಿ ಮಳೆಯಾಗಿರುವ ಕಾರಣ ಇಳುವರಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗಬಹುದು ಎಂದೂ ಸಹ ಹೇಳಲಾಗುತ್ತಿದೆ.