alex Certify BIG NEWS: ಒಂದು ವಾರದಲ್ಲಿ ಮೂವರು ಯುವಕರ ಹತ್ಯೆ; ಇನ್ನೆಷ್ಟು ಕೊಲೆಗಳು ನಡೆದರೆ ಸರ್ಕಾರಕ್ಕೆ ತೃಪ್ತಿ….? ಕರಾವಳಿ ಮಾತ್ರವಲ್ಲ ಕರ್ನಾಟಕದ ಪ್ರತಿಷ್ಠೆಗೂ ಪೆಟ್ಟು; HDK ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದು ವಾರದಲ್ಲಿ ಮೂವರು ಯುವಕರ ಹತ್ಯೆ; ಇನ್ನೆಷ್ಟು ಕೊಲೆಗಳು ನಡೆದರೆ ಸರ್ಕಾರಕ್ಕೆ ತೃಪ್ತಿ….? ಕರಾವಳಿ ಮಾತ್ರವಲ್ಲ ಕರ್ನಾಟಕದ ಪ್ರತಿಷ್ಠೆಗೂ ಪೆಟ್ಟು; HDK ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹೆಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಇದೆಯಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರಾವಳಿ ಶಿಕ್ಷಣದ ಕಾಶಿ, ದೇಗುಲಗಳ ಪುಣ್ಯನೆಲ, ಪ್ರಾಕೃತಿಕ ಸೌಂದರ್ಯದ ಬೀಡು, ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕೀರ್ತಿಕಳಸ. ಇಂಥ ನೆಲದಲ್ಲಿ ದಿನಕ್ಕೊಂದು ಕೊಲೆ!! ಈ ಕೊಲೆಗಳನ್ನು ಹತ್ತಿಕ್ಕುವ ಬದಲು ಬೊಮ್ಮಾಯಿ ಅವರು ʼಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕವನ್ನು ʼಜಂಗಲ್ ರಾಜ್ʼ ಮಾಡುವ ಹುನ್ನಾರವಷ್ಟೇ ಇದು ಎಂದು ಕಿಡಿಕಾರಿದ್ದಾರೆ.

ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ʼವ್ಯಸನʼವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧಮನಸ್ಸಿಗೆ ʼಕೋಮುಪ್ರಾಷನʼ ಮಾಡಿದ ದುಷ್ಪರಿಣಾಮವೇ ಸರಣಿ ಕೊಲೆಗಳು. ಧರ್ಮನಿರಪೇಕ್ಷತೆ ತತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸೂದ್, ಪ್ರವೀಣ್ ನೆಟ್ಟಾರು, ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರಕಾರಕ್ಕೆ ತೃಪ್ತಿ? ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ, ಬಿಜೆಪಿ ಸರಕಾರ ಸಾವಿನಲ್ಲೂ ʼಕೊಲೆಗಡುಕ ರಾಜಕಾರಣʼ ಮಾಡುತ್ತಿದೆ. ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ಸರಕಾರ, ಪ್ರತೀ ಕೊಲೆಗೂ ತಾನೇ ಮುಂದೆ ನಿಂತು ಹೊಸಹೊಸ ಟ್ವಿಸ್ಟ್ ನೀಡುತ್ತಿದೆ. ಸರಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ.

ಕರಾವಳಿಯಲ್ಲಿ ನೆಮ್ಮದಿ ನೆಲಸಬೇಕಾದರೆ, ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ, ಡಬಲ್ ಎಂಜಿನ್ ಸರಕಾರಕ್ಕೆ ಜನರೇ ಬೆಂಕಿ ಹಾಕಿಯಾರು ಎಂದು ಎಚ್ಚರಿಕೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...