ಬೆಂಗಳೂರು: ಬಡವರಿಗೆ ಹಾಗೂ ಹಿಂದುಳಿದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹಿಂದೆ ಅನುಷ್ಠಾನ ಮಾಡಿದ್ದ ಒಂಟಿ ಮನೆ ಯೋಜನೆಯನ್ನು ಪುನರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತ ಆದೇಶ ಶೀಘ್ರವಾಗಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಸಿಟಿ ರೌಂಡ್ಸ್ ವೇಳೆ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಮಗಾರಿಯ ವೀಕ್ಷಣೆ ನಡೆಸಿ ಮಾತನಾಡಿದ ಸಿಎಂ, ಕೋವಿಡ್ ಸಾಂಕ್ರಾಮಿಕದಿಂದಾಗಿ ನಿಂತು ಹೋಗಿದ್ದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಸ್ಥಳವಿದ್ದವರು ಒಂಟಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವಾಗಲಿದೆ. ಪ್ರತಿ ವಾರ್ಡಿಗೆ ಮನೆಗಳ ಸಂಖ್ಯೆಯನ್ನು ನಿಗದಿ ಮಾಡಲಾಗುವುದು ಎಂದರು.
ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ನಾಗರಿಕರಿಗೆ ಕಾನೂನಿನ ತೊಡಕುಗಳನ್ನು ಸರಿಪಡಿಸಿ ಬೆಂಗಳೂರಿನ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಗರಿ ಮೂಡಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ಜೋಡಿಸಲಾಗುತ್ತಿದೆ. ನಗರಕ್ಕೆ ತನ್ನದೇ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಏಕಸಾಮ್ಯ ಆಡಳಿತ ತರುವ ಕೆಲಸ, 20 ಶಾಲೆಗಳನ್ನು ಆಧುನಿಕರಣ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ, ಸೌಂದರ್ಯೀಕರಣವನ್ನು ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು.
ಇನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೊಸ ಪ್ರಯೋಗವನ್ನು ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯವರು ಮಾಡಿದ್ದಾರೆ. ರಾಜಕಾಲುವೆ ಶುದ್ಧಗೊಳಿಸಿ ಅದಕ್ಕೆ ಬರುವ ಚರಂಡಿ ನೀರನ್ನು ಶುದ್ಧೀಕರಣ ಮಾಡಿ ಅಕ್ಕಪಕ್ಕದ ಸ್ಥಳವನ್ನು ನಾಗರಿಕರ ಮಾರ್ಗವನ್ನಾಗಿ ಮಾಡಿದ್ದಾರೆ. 23-24 ಕಿಮಿ ಪೈಕಿ 9 ಕಿಮಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡಲಾಗಿದೆ. ಎಲ್ಲಾ ರಾಜಕಾಲುವೆಯನ್ನು ಈ ರೀತಿ ಅಭಿವೃದ್ಧಿಗೊಳಿಸಿದರೆ ಬೆಂಗಳೂರು ಉತ್ತಮ ನಗರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.