ಕಳೆದ ಐದೂವರೆ ತಿಂಗಳಿನಿಂದ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ 40 ಪೈಸೆಯಷ್ಟು ಕಡಿಮೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ ದರ 101.52 ರೂಪಾಯಿಗಳಾಗಿದ್ದರೆ, ಡೀಸೆಲ್ ದರ 87.47 ರೂಪಾಯಿಗಳಾಗಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 96.65 ರೂಪಾಯಿಗಳಾಗಿದ್ದು, ಡೀಸೆಲ್ ದರ 89.82 ರೂಪಾಯಿಗಳಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 106.31 ರೂಪಾಯಿಗಳಾಗಿದ್ದು, ಡೀಸೆಲ್ ದರ 94.27 ರೂಪಾಯಿಗಳಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಭಾರತದ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತಿದ್ದು, ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಭಾರತದಲ್ಲೂ ಪೆಟ್ರೋಲ್ – ಡೀಸೆಲ್ ದರ ಕಡಿಮೆಯಾಗಿದೆ.