ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಈ ನಡುವೆ ಕರ್ನಾಟಕ ಕಾಂಗ್ರೆಸ್, ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಐಟಿ, ಇಡಿ, ಸಿಬಿಐ ನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಗುಆರೋಪಿಸಿದೆ.
ಐಟಿ, ಇಡಿ, ಸಿಬಿಐ ಸಂಸ್ಥೆಗಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಇವುಗಳು ನಿಜಕ್ಕೂ ಸ್ವತಂತ್ರ ಸಂಸ್ಥೆಗಳಾಗಿದ್ದರೆ, ಆಶ್ಚರ್ಯಕರವಾಗಿ ಬೆಳೆದ ಜಯ್ ಶಾ ಅವರ ಆದಾಯದ ಮೂಲವನ್ನು ಹುಡುಕಲಿಲ್ಲ ಏಕೆ? ಎಂದು ಪ್ರಶ್ನಿಸಿದೆ.
₹ 500 ಕೋಟಿಗೂ ಅಧಿಕ ವೆಚ್ಚದಲ್ಲಿ ತಮ್ಮ ಮಗಳ ಮದುವೆ ಮಾಡಿದ ಜನಾರ್ದನ್ ರೆಡ್ಡಿ ಅವರ ಹಣದ ಮೂಲ ಯಾವುದೆಂದು ಕೇಳಲಿಲ್ಲವೇಕೆ?
ಸಿಎಂ ಹುದ್ದೆ ಸಿಗಬೇಕಾದರೆ ₹ 2,500 ಕೋಟಿ ಹಣ ಕೊಡಬೇಕಾಗುತ್ತದೆ ಎಂದು ಅವರದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದರು. ಈ ಹೇಳಿಕೆಯ ಬೆನ್ನು ಬೀಳಲಿಲ್ಲವೇಕೆ?
ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ, ಹಿಂಬಾಗಿಲಿನಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿತು, ಆಪರೇಷನ್ ಕಮಲದ ₹ 1000 ಕೋಟಿ ವ್ಯವಹಾರ ಕೇಳಲಿಲ್ಲವೇಕೆ?
ಅದಾನಿ ಪೋರ್ಟ್‌ನಲ್ಲಿ ಹಲವು ಬಾರಿ ದೊಡ್ಡ ಮೊತ್ತದ ಡ್ರಗ್ಸ್ ದಂಧೆ ನಡೆದಿರುವ ವರದಿ ಮಾಧ್ಯಗಳಲ್ಲೇ ಪ್ರಕಟವಾಗಿವೆ, ಹಾಗಿದ್ದರೂ ಡ್ರಗ್ಸ್ ಪ್ರಕರಣದ ತನಿಖೆ ಮಾಡಲಿಲ್ಲ ಏಕೆ? ಇತ್ತೀಚಿಗೆ ಆಪರೇಷನ್ ಕಮಲಕ್ಕೊಳಪಟ್ಟ ಮುಂಬೈ ಶಾಸಕರ ಮೇಲೆ ಕೊಟ್ಯಂತರ ರೂಪಾಯಿ ಹಣ ವೆಚ್ಚ ಮಾಡಲಾಗಿದೆ, ಈ ಹಣದ ಮೂಲ ಹುಡುಕಲಿಲ್ಲ ಏಕೆ?
ಕರ್ನಾಟಕಲ್ಲಿ ಮಂತ್ರಿ ಪದವಿ ₹ 50 ರಿಂದ ₹ 60 ಕೋಟಿಗೆ ಮಾರಾಟವಾಗುತ್ತಿವೆ ಎಂಬ ವಿಚಾರದ ತನಿಖೆ ನಡೆಸಲಿಲ್ಲ ಏಕೆ? ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರಿಸುವಂತೆ ಆಗ್ರಹಿಸಲಾಗಿದೆ.