ಬೆಂಗಳೂರು: ಮರೆಯಾಗಿದ್ದ ಕೊರೊನಾ ಮಹಾಮಾರಿ ಮತ್ತೆ ಹೊಸ ರೂಪದಲ್ಲಿ ವಕ್ಕರಿಸುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 3-4 ವಾರಗಳಲ್ಲಿ ಕೋವಿಡ್ 4ನೇ ಅಲೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಲಿದ್ದು, ಕೋವಿಡ್ ಮುಂಜಾಗೃತೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಏಪ್ರಿಲ್ 24ರಂದು ರಾಜ್ಯದಲ್ಲಿ 60 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 1676 ಸಕ್ರಿಯ ಪ್ರಕರಣಗಳಿವೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಆತಂಕ ಎದುರಾಗಿದೆ.
ಇನ್ನು ಕೇರಳ, ಮಹಾರಾಷ್ಟ್ರಗಳಲ್ಲಿಯೂ ಕೋವಿಡ್ ಕೇಸ್ ಹೆಚ್ಚುತ್ತಿದ್ದು, ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಏಪ್ರಿಲ್ 27ರಂದು ಪ್ರಧಾನಿ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಸಭೆಯಲ್ಲಿ ಕೋವಿಡ್ ನಾಲ್ಕನೇ ಅಲೆ ಬಗ್ಗೆ ಮುಂಜಾಗೃತಾ ಕ್ರಮ, ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ. ಪ್ರಧಾನಿ ಮೋದಿ ಸಲಹೆ ಸೂಚನೆ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ತಜ್ಞರು ಕೂಡ ಮುಂದಿನ 4 ವಾರಗಳು ಕರ್ನಾಟಕಕ್ಕೆ ನಿರ್ಣಾಯಕ ಎಂದು ಎಚ್ಚರಿಕೆ ನೀಡಿದ್ದು, ಇಂದು ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಹಾಗೂ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಮೇರೆಗೆ ಕೋವಿಡ್ ನಾಲ್ಕನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದಲ್ಲಿ ಏಪ್ರಿಲ್ 27ರ ಬಳಿಕ ಕಠಿಣ ನಿಯಮಗಳು ಜಾರಿಯಾಗಲಿದೆಯೇ? ಎಂದು ಕಾದುನೋಡಬೇಕಿದೆ.