
ಮಹಿಳೆಯೊಬ್ಬರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಕಾನೂನು ಸಮರದಲ್ಲಿ ಗೆದ್ದಿದ್ದಾರೆ. ಆಕೆ ಪಡೆದಿದ್ದ 54.09 ಲಕ್ಷ ರೂಪಾಯಿ ಸಾಲವನ್ನು ವಾಪಸ್ ಪಡೆಯದಂತೆ ಎಸ್.ಬಿ.ಐ.ಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ. ಬೆಂಗಳೂರಿನಲ್ಲಿ ನಡೆದಿರೋ ಪ್ರಕರಣ ಇದು. ದೂರುದಾರ ಮಹಿಳೆಗೆ 1 ಲಕ್ಷ ರೂಪಾಯಿ ಪರಿಹಾರ ಮತ್ತು ವ್ಯಾಜ್ಯ ವೆಚ್ಚ 20,000 ರೂಪಾಯಿಯನ್ನು ಪಾವತಿಸುವಂತೆ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
36 ವರ್ಷದ ಧರಣಿ, ಬ್ಯಾಂಕ್‌ನ ನಿರ್ಲಕ್ಷ್ಯದಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನೊಂದಿದ್ದಾರೆ ಎಂಬುದು ಗ್ರಾಹಕ ನ್ಯಾಯಾಲಯದ ಗಮನಕ್ಕೆ ಬಂದಿದೆ. “ಇದು ಸೇವೆಯ ಕೊರತೆ ಮತ್ತು SBIನ ವೈಟ್‌ಫೀಲ್ಡ್ ಶಾಖೆಯ ಅನ್ಯಾಯದ ವ್ಯಾಪಾರ ಅಭ್ಯಾಸಕ್ಕೆ ಸಮಾನವಾಗಿದೆ” ಎಂದು ಆಯೋಗವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. 2021ರ ಮೇ 20 ರಂದು ಧರಣಿ ಅವರ ಪತಿ ರೂಪೇಶ್ ರೆಡ್ಡಿ ನಿಧನರಾಗಿದ್ದಾರೆ. ಬಳಿಕ ಧರಣಿ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದರು.
ಅಪ್ರಾಪ್ತ ಮಕ್ಕಳು, ಪೋಷಕರ ಜವಾಬ್ಧಾರಿ, ಮನೆಯ ನಿರ್ವಹಣೆಯ ಹೊಣೆ ತಮ್ಮ ಮೇಲಿರುವುದರಿಂದ ಸಾಲವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿಯ ಅರ್ಜಿ ನಮೂನೆಯಲ್ಲಿ ದಂಪತಿ ಆರಂಭದಲ್ಲಿ ಆಯ್ಕೆ ಮಾಡಿದ ವಿಮಾ ರಕ್ಷಣೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ ಔಪಚಾರಿಕ ಅಧಿಕಾರವನ್ನು ಕೊಡದೇ ಇದ್ದಿದ್ದರಿಂದ ವಿಮಾ ಕಂಪನಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದು ಎಸ್‌ಬಿಐ ವಾದಿಸಿತ್ತು.
ಮಂಜೂರಾತಿ ಅಡಿಯಲ್ಲಿ ಅಗತ್ಯವಿರುವಂತೆ ಎಸ್.ಬಿ.ಐ. ಲೈಫ್ ಇನ್ಶೂರೆನ್ಸ್‌ಗೆ ಯಾವುದೇ ಪ್ರೀಮಿಯಂ ಪಾವತಿಸದ ಕಾರಣ, ಸಾಲಗಾರರ ಜೀವಗಳಿಗೆ ವಿಮೆ ಮಾಡಲಾಗಿಲ್ಲ ಎಂದು ವಾದ ಮಂಡಿಸಿತ್ತು. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಬ್ಯಾಂಕ್, ಸಾಲವನ್ನು ರದ್ದುಗೊಳಿಸಿಲ್ಲ ಎಂದು ಧರಣಿ ದೂರಿನಲ್ಲಿ ಉಲ್ಲೇಖಿಸಿದ್ದರು.
ವಿಮಾದಾರರು EMI ಮೂಲಕ ಬಡ್ಡಿ ಸಮೇತ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೂ ಸಹ “SBI Life-RiNn ರಕ್ಷಾ” ಅಡಿಯಲ್ಲಿ ಗೃಹ ಸಾಲದ ವಿಮಾ ರಕ್ಷಣೆಗೆ ಅಗತ್ಯತೆಗಳನ್ನು ಪೂರ್ಣಗೊಳಿಸಲಾಗಿಲ್ಲ ಎಂಬ ಬ್ಯಾಂಕ್‌ನ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಮಹಿಳೆಯ ಪರವಾಗಿ ತೀರ್ಪು ಬಂದಿದ್ದು, ಲೋನ್ ಮೊತ್ತವನ್ನು ಹಿಂಪಡೆಯದಂತೆ ಎಸ್.ಬಿ.ಐ.ಗೆ ಆದೇಶಿಸಲಾಗಿದೆ.