ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಕೋಟಿಗಟ್ಟಲೆ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ನೀವು ದೇಶದ ಈ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದರೆ ಜೂನ್ 30ರ ದಿನಾಂಕವು ನಿಮಗೆ ಬಹಳ ಮುಖ್ಯ. ಜೂನ್ 30 ರಿಂದ ದೇಶದ ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರುವ ಪ್ರಮುಖ ನಿಯಮಗಳನ್ನು ಬ್ಯಾಂಕ್ ಬದಲಾಯಿಸಲಿದೆ. ಈ ಬಗ್ಗೆ ಎಸ್‌ಬಿಐ ತನ್ನ ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.
ಎಸ್‌ಬಿಐ ಜೂನ್ 30 ರಿಂದ ಬ್ಯಾಂಕ್ ಲಾಕರ್‌ಗಳ ನಿಯಮಗಳನ್ನು ಬದಲಾಯಿಸಲು ಮುಂದಾಗಿದೆ. ಜೂನ್ 30, 2023 ರೊಳಗೆ ಪರಿಷ್ಕೃತ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಇಂಟರ್ನೆಟ್‌ನಲ್ಲಿ ಲಾಕರ್ ಹೊಂದಿರುವವರಿಗೆ ಮನವಿ ಕೂಡ ಮಾಡಿದೆ. ಕಳೆದ ಕೆಲವು ದಿನಗಳಿಂದ ಬ್ಯಾಂಕ್ ನಿರಂತರವಾಗಿ ಈ ಕುರಿತು ಸಲಹೆ ನೀಡುತ್ತಿದೆ. ಆದಷ್ಟು ಬೇಗ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ.
ನೀವು ಈಗಾಗಲೇ ನವೀಕರಿಸಿದ ಒಪ್ಪಂದಕ್ಕೆ ಸಹಿ ಮಾಡಿದ್ದರೆ ಪೂರಕ ಒಪ್ಪಂದವನ್ನು ಕಾರ್ಯಗತಗೊಳಿಸಬೇಕಾಗಿದೆ. ಎಸ್‌ಬಿಐ ಹೊರತಾಗಿ, ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಕೂಡ ಪರಿಷ್ಕೃತ ಲಾಕರ್ ಒಪ್ಪಂದಗಳಿಗೆ ನಿಗದಿತ ದಿನಾಂಕದೊಳಗೆ ಸಹಿ ಹಾಕುವಂತೆ ಕೇಳಿಕೊಳ್ಳಲಾಗುತ್ತಿದೆ. ಈ ಸಂಬಂಧ ಆರ್‌ಬಿಐ ಕೂಡ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯ ಪ್ರಕಾರ ಎಲ್ಲಾ ಬ್ಯಾಂಕ್‌ಗಳು ಲಾಕರ್‌ಗೆ ಸಂಬಂಧಿಸಿದ ನಿಯಮಗಳು ಮತ್ತು ಒಪ್ಪಂದಗಳ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡಬೇಕು.
ಜೂನ್ 30 ರೊಳಗೆ 50 ಪ್ರತಿಶತ ಗ್ರಾಹಕ ಒಪ್ಪಂದಗಳನ್ನು ಮತ್ತು ಸೆಪ್ಟೆಂಬರ್ 30 ರೊಳಗೆ 75 ಪ್ರತಿಶತವನ್ನು ಪರಿಷ್ಕರಿಸಬೇಕಾಗುತ್ತದೆ. ಪರಿಷ್ಕೃತ ನಿಯಮಗಳ ಪ್ರಕಾರ ಬೆಂಕಿ ಅವಘಡ, ಕಳ್ಳತನ, ಡಕಾಯಿತಿ, ಬ್ಯಾಂಕ್‌ನ ನಿರ್ಲಕ್ಷ್ಯ ಅಥವಾ ಉದ್ಯೋಗಿಗಳ ಕಡೆಯಿಂದ ಲಾಕರ್‌ನಲ್ಲಿಟ್ಟಿರುವ ವಸ್ತುಗಳಿಗೆ ಯಾವುದೇ ರೀತಿಯ ನಷ್ಟವಾದಲ್ಲಿ, ಅದನ್ನು ಬ್ಯಾಂಕ್ ಭರಿಸಬೇಕು. ಈ ಪರಿಹಾರವು ಲಾಕರ್‌ನ ವಾರ್ಷಿಕ ಬಾಡಿಗೆಯ 100 ಪಟ್ಟಿಗೆ ಸಮಾನವಾಗಿರುತ್ತದೆ.