ಬೆಂಗಳೂರು: ಲೋಕಾಯುಕ್ತವನ್ನೇ ಮುಚ್ಚಿದವರು ಇಂದು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನವರು ಕೇವಲ ಅಧಿಕಾರಕ್ಕಾಗಿ ಇರುವವರು. ನಮ್ಮದು ಭಾರತ್ ಮಾತಾಕಿ ಜೈ ಎಂದಾದರೆ ಕಾಂಗ್ರೆಸ್ ನವರದ್ದು ಸೋನಿಯಾ ಮಾತಾಕಿ ಜೈ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ 5 ವರ್ಷಗಳ ಕಾಲ ಕಾಂಗ್ರೆಸ್, ಬಳಿಕ ಒಂದುವರೆ ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರದ ದೌರ್ಭಾಗ್ಯಗಳನ್ನು ಅನುಭವಿಸಿದೆವು. ಅಧಿಕಾರದ ಆಸೆಗಾಗಿ ಈಗ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈಗ ಎಸಿಬಿಯಲ್ಲಿ ಬಿ ರಿಪೋರ್ಟ್ ಆಗಿದ್ದ ಎಲ್ಲಾ ಹಗರಣಗಳು ಲೋಕಾಯುಕ್ತಕ್ಕೆ ಶಿಫಾರಸ್ಸಾಗಿವೆ. ಕಾಂಗ್ರೆಸ್ ನಾಯಕರ ಎಲ್ಲಾ ಹಗರಣಗಳು ಒಂದೊಂದಾಗಿ ಹೊರ ಬರಲಿದೆ ಎಂದು ವಾಗ್ದಾಳಿ ನಡೆಸಿದರು.
ಇಡೀ ಜಗತ್ತಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು ಭಾರತೀಯ ಜನತಾ ಪಾರ್ಟಿ ಹೊಂದಿದೆ. ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲ ವಿಚಾರಗಳಲ್ಲೂ ವಿಶಾಲತೆಯನ್ನು ಹೊಂದಿದ್ದೇವೆ ಎಂದರು.