ನವದೆಹಲಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ವೈಮನಸ್ಸು ಮುಂದುವರೆಯಲಿ ಎಂದು ಬಿಜೆಪಿ ಯಾವತ್ತೂ ಬಯಸಿರಲಿಲ್ಲ. ಆದರೆ ಎಲ್ಲವನ್ನೂ ಕಾಲವೇ ನಿರ್ಣಯಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ಹಾಗೂ ಅವರ ನಡವಳಿಕೆ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಿದ್ದು, ಹೈಕಮಾಂಡ್ ಗೆ ವರದಿ ನೀಡಲಾಗಿದೆ. ಶೀಘ್ರದಲ್ಲಿ ಪಕ್ಷ ಒಂದು ನಿರ್ಣಯ ಕೈಗೊಳ್ಳಲಿದೆ ಎಂದರು.
ಯತ್ನಾಳ್ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಎಲ್ಲರೂ ಪಕ್ಷಕ್ಕೆ ಬದ್ಧರಾಗಿರಬೇಕು. ಈ ಬಗ್ಗೆ ಹೈಕಮಾಂಡ್ ಗೆ ವರದಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಗುಜರಾತ್ ರೀತಿ ರಾಜ್ಯದಲ್ಲಿ ಗೆಲುವು ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಸಮಾಲೋಚಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಭರವಸೆ ಇದೆ ಎಂದು ಹೇಳಿದರು.