ಬೆಂಗಳೂರು: ವಿಧಾನಸಭಾ ಚುನಾವಣೆ ಸೋತ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ದವರಿಲ್ಲ ಎಂದು ನಂಬಿದವನು ನಾನು ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, ಗೋವಿಂದರಾಜ ನಗರದಲ್ಲಿ 480 ಕೋಟಿ ರೂಪಾಯಿಗೂ ಹೆಚ್ಚಿನ ಕೆಲಸ ಮಾಡಿದ್ದೇನೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಅಲ್ಲಿಂದ ಸ್ಪರ್ಧಿಸಿದ್ರೆ ನಾನು ಮನೆಯಲ್ಲಿ ಆರಾಮವಾಗಿ ಮಲಗಿದ್ದರೂ ಗೆಲ್ಲುತ್ತಿದ್ದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದೆ. ಎರಡರಲ್ಲೂ ಸೋತು ಈಗ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ. ನನಗೆ ಯಾವುದೇ ಡಬಲ್ ಸ್ಟ್ಯಾಂಡರ್ಡ್ ಇಲ್ಲ. ಬಿಜೆಪಿಗೆ ಬಂದ ಎಂತಹ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ಕೆಲಸ ಮಾಡಲು ಅವಕಾಶ ಕೇಳಿದ್ದೇನೆ ಎಂದು ಹೇಳಿದರು.