ಭಾರತದ ಏಳು ಪ್ರಮುಖ ನಗರಗಳಲ್ಲಿನ ಐಷಾರಾಮಿ ವಸತಿ ಕಾಲೋನಿಗಳಲ್ಲಿ ಸರಾಸರಿ ಮಾಸಿಕ ಬಾಡಿಗೆಗಳು ಕಳೆದ ಎರಡು ವರ್ಷಗಳಲ್ಲಿ ಗಗನಕ್ಕೇರಿವೆ. ಮನೆ ಬಾಡಿಗೆ 8-18 ಪ್ರತಿಶತದಷ್ಟು ಏರಿಕೆಯಾಗಿದೆ. ಆದರೆ ಬಂಡವಾಳ ಮೌಲ್ಯವು ಶೇ.2-9ರಷ್ಟು ಹೆಚ್ಚಾಗಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ ಸುಸಜ್ಜಿತ ಸ್ಥಳಗಳಲ್ಲಿ ಮನೆ ಮತ್ತಿತರ ವಸತಿಗಳ ಬಾಡಿಗೆ ವಿಪರೀತ ಹೆಚ್ಚಳವಾಗಿದೆ. ಆಸ್ತಿಗಳಿಗೆ ಬೇಡಿಕೆ ಸಹ ಹೆಚ್ಚಿದೆ. ಅಂಕಿ-ಅಂಶಗಳ ಪ್ರಕಾರ ಮುಂಬೈನ ವರ್ಲಿಯಲ್ಲಿ ಸುಮಾರು 2,000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆಗಳಿಗೆ 2020 ರಲ್ಲಿ ತಿಂಗಳಿಗೆ ರೂ 2 ಲಕ್ಷ ರೂಪಾಯಿಯಷ್ಟು ಬಾಡಿಗೆ ಇತ್ತು. ಈಗ ಶೇ. 18 ರಷ್ಟು ಹೆಚ್ಚಳದೊಂದಿಗೆ ಮನೆ ಬಾಡಿಗೆ 2.35 ಲಕ್ಷ ರೂಪಾಯಿ ಆಗಿದೆ.
ಇನ್ನು ಬೆಂಗಳೂರಿನ ರಾಜಾಜಿನಗರದಲ್ಲಿ 2020 ರಲ್ಲಿ ಚದರ ಅಡಿಗೆ 5,698 ರೂಪಾಯಿ ಇತ್ತು. 2022 ರಲ್ಲಿ ಚದರ ಅಡಿಗೆ 6,200 ರೂಪಾಯಿಗೆ ಏರಿಕೆ ಕಂಡಿದೆ. ಪ್ರಮುಖ ಐಷಾರಾಮಿ ವಸತಿ ಮಾರುಕಟ್ಟೆಗಳು ಕಳೆದ ಎರಡು ವರ್ಷಗಳಲ್ಲಿ, ಬಾಡಿಗೆಯಲ್ಲಿ ಎರಡಂಕಿಯ ಬೆಳವಣಿಗೆಯನ್ನು ಕಂಡಿವೆ. ಕೋವಿಡ್‌ಗೂ ಮುನ್ನ ಈ ಬೆಳವಣಿಗೆ ಒಂದಂಕಿಯಲ್ಲಿತ್ತು. ಕೊರೊನಾ ಎರಡನೇ ಅಲೆಯ ಬಳಿಕ ಜನರು ಕೂಡ ದೊಡ್ಡ ಮನೆಗಳನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ.
ಜನವಸತಿಗೆ ಹೆಸರುವಾಸಿಯಾದ ಬೆಂಗಳೂರಿನ ಜೆಪಿ ನಗರದಲ್ಲಿ ಮನೆ ಐಷಾರಾಮಿ ಮನೆಗಳ ಬಾಡಿಗೆ 2020ರಲ್ಲಿ 46,000 ರೂಪಾಯಿ ಇತ್ತು. 2022ರಲ್ಲಿ ಶೇ.13ರಷ್ಟು ಹೆಚ್ಚಳದೊಂದಿಗೆ 56,000 ರೂಪಾಯಿ ಆಗಿದೆ. ರಾಜಾಜಿನಗರದಲ್ಲಿ ತಿಂಗಳ ಬಾಡಿಗೆ 56,000 ರೂಪಾಯಿ ಇದ್ದಿದ್ದು, ಶೇ.16ರಷ್ಟು ಏರಿಕೆಯೊಂದಿಗೆ 65,000 ರೂಪಾಯಿಗೆ ತಲುಪಿದೆ.
ಚೆನ್ನೈನ ಅಣ್ಣಾ ನಗರದಲ್ಲಿ ಸರಾಸರಿ ಬಾಡಿಗೆ ತಿಂಗಳಿಗೆ 56,000 ರೂಪಾಯಿಯಿಂದ 63,000 ರೂಪಾಯಿಗೆ ಹೆಚ್ಚಳವಾಗಿದೆ. ಹೈದರಾಬಾದ್‌ನ ಐಷಾರಾಮಿ ವಸತಿಗೆ ಹೆಸರಾಗಿರುವ ಜುಬಿಲಿ ಹಿಲ್ಸ್‌ನಲ್ಲಿನ ಸರಾಸರಿ ಮಾಸಿಕ ಬಾಡಿಗೆಗಳು 2022 ರಲ್ಲಿ 62,000 ರೂಪಾಯಿಗೆ ಬಂದು ತಲುಪಿವೆ. ಹೈದರಾಬಾದ್‌ನಲ್ಲೂ ಸರಾಸರಿ ಶೇ.11ರಷ್ಟು ಬಾಡಿಗೆ ಹೆಚ್ಚಳವಾಗಿದೆ. ಬಂಡವಾಳದ ಬೆಲೆಯಲ್ಲಿ ಶೇ.7ರಷ್ಟು ಏರಿಕೆಯಾಗಿದ್ದು, ಪ್ರತಿ ಚದರ ಅಡಿಗೆ 6,100 ರೂಪಾಯಿಗೆ ಬಂದು ತಲುಪಿದೆ.
ಕೋಲ್ಕತ್ತಾದಲ್ಲಿ, ಅಲಿಪೋರ್‌ನಲ್ಲಿ ಐಷಾರಾಮಿ ಮನೆ ಬಾಡಿಗೆಗಳು 65,000 ರೂಪಾಯಿ ಆಗಿದೆ. ದೆಹಲಿಯ ಗಾಲ್ಫ್ ಕೋರ್ಸ್ ರಸ್ತೆಯಲ್ಲಿನ ಮನೆಗಳಿಗೆ ಸರಾಸರಿ ಮಾಸಿಕ ಬಾಡಿಗೆಗಳು 2020ರಲ್ಲಿ 70,000 ರೂಪಾಯಿ ಇತ್ತು. ಈಗ ಶೇ.11ರಷ್ಟು ಏರಿಕೆಯೊಂದಿಗೆ 78,000 ರೂಪಾಯಿಗೆ ತಲುಪಿದೆ.