ದಾವಣಗೆರೆ: ಸಹೋದರನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಕಿಡಿಕಾರಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಚಂದ್ರಶೇಖರ್ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈಗ ತನಿಖೆ ವಿಳಂಬ ಮಾಡಿ ಕಥೆ ಕಟ್ಟುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡದಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಅಧಿಕಾರಿ ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆಗಿದ್ದರು. ಅವರಿಂದ ಯಾವ ರೀತಿ ಸಮರ್ಪಕ ತನಿಖೆಯಾಗಲಿದೆ? ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ ಎಂದು ಹೇಳುವ ಮೂಲಕ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಗುಡುಗಿದ್ದಾರೆ.
ಪೊಲಿಸರು ಬೋಗಸ್ ತನಿಖೆ ಮಾಡುತ್ತಿದ್ದಾರೆ. ಚಂದ್ರಶೇಖರ್ ಶವ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಸಿಸಿ ಟಿವಿ ದೃಶ್ಯ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಚಂದ್ರಶೇಖರ್ ನದ್ದು ಕೊಲೆ. ಕೆಲ ಫೋಟೋ, ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ. ಪಾರದರ್ಶಕ ತನಿಖೆ ಮಾಡಿ ನ್ಯಾಯ ಕೊಡಿಸಲಿ ಎಂದು ಹೇಳಿದ್ದಾರೆ.