ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎಡಪಾಡಿ ಪಳನಿಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಮಾಜಿ ಸಿಎಂ, ಪಕ್ಷದ ನಾಯಕ ಓ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಎ. ಪಳನಿಸ್ವಾಮಿ ನೇತೃತ್ವದಲ್ಲಿ ಇಂದು ನಡೆದ ಎಐಎಡಿಎಂಕೆ ಸಭೆಯಲ್ಲಿ ಮಾಜಿ ಸಿಎಂ ಓ. ಪನ್ನೀರ್ ಸೆಲ್ವಂ ಸೇರಿದಂತೆ ಅವರ ನಾಲ್ವರು ಬೆಂಬಲಿಗರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಪನ್ನೀರ್ ಸೆಲ್ವಂ ಡಿಎಂಕೆ ಜತೆ ಸಂಪರ್ಕ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.
ಪನ್ನೀರ್ ಸೆಲ್ವಂ ಆಪ್ತರಾದ ಜೆಸಿಡಿ ಪ್ರಭಾಕರ್, ಆರ್. ವೈತಿಲಿಂಗಂ, ಕೆ.ಪಿ. ಮುನಿಸ್ವಾಮಿ ಅವರನ್ನು ಕೂಡ ಪಕ್ಷದಿಂದ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ವಜಾಗೊಳಿಸುತ್ತಿದ್ದಂತೆ ಅವರ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದ್ದು, ಎಐಎಡಿಎಂಕೆ ಕಚೇರಿಯಲ್ಲಿ ಬೆಂಬಲಿತ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.