ನೋಯ್ಡಾ: ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ನಡೆದ ವಾಟರ್ ವೀಕ್ ಕಾರ್ಯಕ್ರಮವು ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗಮಿಸಿದ್ದರು. ಈ ವೇಳೆ ಭದ್ರತೆ ವಿಚಾರದಲ್ಲಿ ಪೊಲೀಸರಿಂದ ದೊಡ್ಡ ಪ್ರಮಾದವೊಂದು ಬಯಲಿಗೆ ಬಂದಿದೆ.
ಭದ್ರತೆಗೆ ನಿಯೋಜಿಸಲಾಗಿದ್ದ 15 ಪೊಲೀಸರು ಗೈರುಹಾಜರಾಗಿದ್ದರು ! ಗ್ರೇಟರ್ ನೋಯ್ಡಾದ ಡಿಸಿಪಿ ಅಭಿಷೇಕ್ ವರ್ಮಾ ಅವರು ಈ ಕುರಿತು ತನಿಖೆ ನಡೆಸಿದಾಗ ಇಬ್ಬರು ಪೊಲೀಸ್ ಠಾಣೆಗಳ ಪ್ರಭಾರಿಗಳು, ಐಟಿ ಸೆಲ್‌ನ ಒಬ್ಬ ಇನ್‌ಸ್ಪೆಕ್ಟರ್, ಒಬ್ಬ ಸಬ್ ಇನ್‌ಸ್ಪೆಕ್ಟರ್, ಮಹಿಳಾ ಸಬ್ ಇನ್‌ಸ್ಪೆಕ್ಟರ್, ಆರು ಹೆಡ್ ಕಾನ್‌ಸ್ಟೆಬಲ್‌ಗಳು, ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳು ಗೈರುಹಾಜರಾಗಿರುವುದು ಕಂಡುಬಂದಿದೆ.
ಇವರ ಪೈಕಿ ಹಲವು ಪೊಲೀಸರು ನಿಗದಿತ ಸಮಯಕ್ಕಿಂತಲೂ ಬಹಳ ವಿಳಂಬವಾಗಿ ಸ್ಥಳಕ್ಕೆ ಆಗಮಿಸಿದ್ದು, ಅವರನ್ನು ಗೈರುಹಾಜರಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಪ ರಾಷ್ಟ್ರಪತಿಗಳ ಭದ್ರತೆಗೆ ಸಂಬಂಧಿಸಿದಂತೆ ಗ್ರೇಟರ್ ನೋಯ್ಡಾ ಪೊಲೀಸ್‌ನ ಉನ್ನತ ಅಧಿಕಾರಿಗಳು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಇಂಡಿಯಾ ಎಕ್ಸ್‌ಪೋ ಮಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರೇಟರ್ ನೋಯ್ಡಾದ ಡಿಸಿಪಿ ಅಭಿಷೇಕ್ ವರ್ಮಾ ಮತ್ತು ಹೆಚ್ಚುವರಿ ಡಿಸಿಪಿ ವಿಶಾಲ್ ಪಾಂಡೆ ಭದ್ರತೆಯ ಬಗ್ಗೆ ನಿಗಾ ಇರಿಸಿದ್ದರು. ಈ ವೇಳೆ ವರ್ಮಾ ಪೊಲೀಸ್ ಪಡೆ ಪರಿಶೀಲನೆ ನಡೆಸಿದಾಗ ಕೆಲ ಪೊಲೀಸರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದಿರುವುದು ಕಂಡು ಬಂದಿದೆ.
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ವಾಟರ್ ವೀಕ್ ಕಾರ್ಯಕ್ರಮವನ್ನು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದರು. ಸಮಾರಂಭದ ಸಮಾರೋಪದಲ್ಲಿಉಪರಾಷ್ಟ್ರಪತಿ ಜಗದೀಪ್ ಧನಕರ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಕೇಂದ್ರದ ಹಲವು ಸಚಿವರು ಭಾಗವಹಿಸಿದ್ದರು.