ಬೆಂಗಳೂರು: ಬಿಎಂಎಸ್ ಟ್ರಸ್ಟ್ ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಸರ್ಕಾರ ಒಪ್ಪಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಎಂಎಸ್ ನ್ನು ಖಾಸಗಿಯವರಿಗೆ ನೀಡುವ ಸಂಚು ನಡೆದಿದೆ. ಟ್ರಸ್ಟ್ ಹಾಗೂ ಟ್ರಸ್ಟ್ ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾವಿರಾರು ಕೋಟಿ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ವಿಧಾನಸಭೆಯಲ್ಲಿ ದಾಖಲೆಗಳನ್ನು ಮುಂದಿಟ್ಟಿದ್ದೇನೆ. ಯಾವೆಲ್ಲ ರೀತಿ ಅಕ್ರಮ ನಡೆದಿದೆ. ಯಾವ ರೀತಿ ಹುನ್ನಾರ ನಡೆದಿದೆ ಎಂಬುದು ದಾಖಲೆಗಳೇ ಮಾತನಾಡುತ್ತಿವೆ. ಸರ್ಕಾರ ಕಾನೂನು ರೀತಿ ಕ್ರಮ ವಹಿಸಿದೆ ಎಂದು ಸಚಿವರು ಸಮಜಾಯಿಷಿ ನೀಡುತ್ತಿದ್ದಾರೆ. ಯಾವ ರೀತಿ ಕಾನೂನು ಕ್ರಮ? ಸಾವಿರಾರು ಕೋಟಿ ಸರ್ಕಾರದ ಸ್ವತ್ತನ್ನು ಗೊತ್ತಾಗದಂತೆ ರಿಯಲ್ ಎಸ್ಟೇಟ್, ಖಾಸಗಿಯವರಿಗೆ ಧಾರೆ ಎರೆಯುವುದು ಕಾನೂನು ಪ್ರಕಾರ ಕ್ರಮವೇ? ನಾವು ಇಟ್ಟಿರುವ ದಾಖಲೆಗಳಲ್ಲಿ ಇವರ ಅಕ್ರಮಗಳು ಸಾಭೀತಾಗಿವೆ. ಮೊದಲು ಸಚಿವ ಅಶ್ವತ್ಥನಾರಾಯಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.